ತಾಂತ್ರಿಕ ದೋಷ ಸರಿಪಡಿಸಿ ಗ್ಯಾರಂಟಿ ಲಾಭ ದೊರಕಿಸಿಕೊಡಿ-ಶಾಸಕ ಮಾನೆ

| Published : Jun 23 2024, 02:00 AM IST

ತಾಂತ್ರಿಕ ದೋಷ ಸರಿಪಡಿಸಿ ಗ್ಯಾರಂಟಿ ಲಾಭ ದೊರಕಿಸಿಕೊಡಿ-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಸಂದರ್ಭದಲ್ಲಿ ತಾಂತ್ರಿಕ ದೋಷಗಳಿಂದ ಕೆಲವು ಫಲಾನುಭವಿಗಳು ವಂಚಿತರಾಗಿದ್ದು, ಕೂಡಲೇ ದೋಷಗಳನ್ನು ಸರಿಪಡಿಸಿ ಯೋಜನೆಯ ಲಾಭ ಫಲಾನುಭವಿಗಳಿಗೆ ದೊರಕಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಸಂದರ್ಭದಲ್ಲಿ ತಾಂತ್ರಿಕ ದೋಷಗಳಿಂದ ಕೆಲವು ಫಲಾನುಭವಿಗಳು ವಂಚಿತರಾಗಿದ್ದು, ಕೂಡಲೇ ದೋಷಗಳನ್ನು ಸರಿಪಡಿಸಿ ಯೋಜನೆಯ ಲಾಭ ಫಲಾನುಭವಿಗಳಿಗೆ ದೊರಕಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಹಾನಗಲ್ಲ ತಾಲೂಕಿನ ಕರಗುದರಿ, ರತ್ನಾಪುರ, ನೆಲ್ಲಿಕೊಪ್ಪ ಸೇರಿದಂತೆ ಹಲವೆಡೆಗಳಲ್ಲಿ ಗ್ರಾಮ ಸಂಚಾರ ಕೈಗೊಂಡು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ೬೦ ಸಾವಿರ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ತಾಂತ್ರಿಕ ದೋಷಗಳಿಂದ ಕೆಲ ಅರ್ಹರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಪ್ರತಿ ಗ್ರಾಪಂ ಮಟ್ಟದಲ್ಲಿ ಅಭಿಯಾನ ನಡೆಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲು ಗಮನ ನೀಡಲಾಗಿದೆ ಎಂದು ತಿಳಿಸಿದ ಅವರು ಆಡಳಿತ ವ್ಯವಸ್ಥೆ ಸುಧಾರಣೆಗೂ ಶ್ರಮಿಸಲಾಗುತ್ತಿದೆ. ನಿಯಮಿತವಾಗಿ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ, ತಾಲೂಕಿನ ಕಂದಾಯ ದಾಖಲೆಗಳನ್ನೆಲ್ಲ ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ಮುಂದಿನ ೨ ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಜೂ. ೨೪ರಂದು ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಕರಗುದರಿ ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್‌ರಜಾಕ್ ಮುಲ್ಲಾ, ಮುಖಂಡರಾದ ಕನಕಪ್ಪ ಲಮಾಣಿ, ಪ್ರವೀಣ ಹಿರೇಮಠ, ಪ್ರದೀಪ ಹರಿಜನ, ತ್ಯಾಗರಾಜ ಓಲೇಕಾರ, ಬಷೀರಅಹ್ಮದ್ ಮುಜಾವರ, ಬಕ್ಷ ತೋಟದ, ಅಬ್ದುಲ್‌ಖಾದರ, ಜಿಲಾನಿ ತುಬಾಕಿ ಈ ಸಂದರ್ಭದಲ್ಲಿದ್ದರು.