ಸಾರಾಂಶ
ಉಚಿತ ಬಿಸಿಜಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕ್ಷಯ ರೋಗದಿಂದ ಮುಕ್ತರಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್ ಹೇಳಿದ್ದಾರೆ.
- ಹೊಳೆ ಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಹರಿಹರ
ಉಚಿತ ಬಿಸಿಜಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕ್ಷಯ ರೋಗದಿಂದ ಮುಕ್ತರಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್ ಹೇಳಿದರು.ತಾಲೂಕಿನ ಹೊಳೆ ಸಿರಿಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ವಯಸ್ಕರ ಬಿಸಿಜಿ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಟಿ.ಬಿ. (ಕ್ಷಯ) ಕಾಯಿಲೆಯಿಂದ ಗುಣಮುಖ ಆದವರು ಹಾಗೂ ಅವರ ನಿಕಟ ಸಂಪರ್ಕದಲ್ಲಿ ಇದ್ದವರು, 60 ವರ್ಷ ದಾಟಿದ ಹಿರಿಯ ನಾಗರೀಕರು, ಅಪೌಷ್ಠಿಕ ಆಹಾರ ಸೇವಿಸುವ ವ್ಯಕ್ತಿಗಳು, ಪ್ರಸ್ತುತ ಅಥವಾ ಹಿಂದೆ ಧೂಮಪಾನ ಮಾಡುವ ವ್ಯಕ್ತಿಗಳು ಹಾಗೂ ಮಧುಮೇಹ ಹೊಂದಿರುವ ವ್ಯಕ್ತಿಗಳು ಒಪ್ಪಿಗೆ ನೀಡಿ ಲಸಿಗೆ ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೇತನ್ ಮಾತನಾಡಿ, ಲಸಿಕೆ ಪಡೆದ ನಂತರ ಆ ಜಾಗದಲ್ಲಿ ನೋವು, ಊತ, ಚರ್ಮ ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇದೆ. ಅದು ಕೆಲ ದಿನಗಳಲ್ಲಿ ಸ್ವಯಂ ಗುಣವಾಗುವುದು. ಈ ಬಗ್ಗೆ ಹೆದರುವ ಅಗತ್ಯವಿಲ್ಲ ಎಂದರು.
ತಾಲೂಕು ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ಮಾತನಾಡಿ, ಬಿಸಿಜಿ ಲಸಿಕೆಯನ್ನು ತೀವ್ರ ಅನಾರೋಗ್ಯ ಪೀಡಿತರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಎಚ್‍ಐವಿ ಸೋಂಕಿತರು, ಕ್ಯಾನ್ಸರ್ ಪೀಡಿತರು, ಕಳೆದ ಮೂರು ತಿಂಗಳ ಹಿಂದೆ ಇತರರಿಂದ ರಕ್ತ ಪಡೆದವರು ಲಸಿಕೆಯನ್ನು ಮಾಡಿಸಿಕೊಳ್ಳಬಾರದು ಎಂದು ತಿಳಿಸಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಮಾಲಾಶ್ರೀ, ಕರಿಬಸಮ್ಮ, ಕಸ್ತೂರಿ ಬಾಯಿ, ಪುಷ್ಪವತಿ, ಶಶಿಕಲಾ ಹಾಗೂ ಲಸಿಕಾ ಫಲಾನುಭವಿಗಳು, ಗ್ರಾಮಸ್ಥರು ಹಾಜರಿದ್ದರು.
- - --06 ಎಚ್‍ಆರ್‍ಆರ್01:
ಹರಿಹರ ತಾಲೂಕಿನ ಹೊಳೆ ಸಿರಿಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ವಯಸ್ಕರ ಬಿಸಿಜಿ ಲಸಿಕಾ ಕಾರ್ಯಕ್ರಮ ನಡೆಯಿತು.