ಸಾರಾಂಶ
ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿಯನ್ನು ಶಾಸಕ ಡಾ.ಎಂ.ಚಂದ್ರಪ್ಪ ಉದ್ಗಾಟಿಸಿದರು.
ನಾರೇಯಣ ಯತೀಂದ್ರರ ಜಯಂತಿಯಲ್ಲಿ ಶಾಸಕ ಚಂದ್ರಪ್ಪ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಬೇರೆ ಸಮಾಜದವರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೇಗೆ ಪ್ರಯತ್ನಿಸುತ್ತಾರೋ ಅದೇ ರೀತಿ ನೀವುಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಮುಂದಾಗಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ಬಲಿಜ ಜನಾಂಗಕ್ಕೆ ಕರೆ ನೀಡಿದರು.ಪಟ್ಟಣದ ಸಂವಿಧಾನಸೌಧದಲ್ಲಿ ಭಾನುವಾರ ಕಾಲಜ್ಞಾನಿ ಯೋಗಿ ನಾರೇಯಣ ಯತೀಂದ್ರರ 299ನೇ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಕಳೆದ ವರ್ಷ ಒಂದು ಎಕರೆ ಜಮೀನು ನೀಡುವಂತೆ ಕೇಳಿದ್ದೀರಿ. ಮತ್ತೆ ಮುಂದಿನ ವರ್ಷವೆ ನೀವುಗಳು ನೆನಪು ಮಾಡಿಕೊಂಡು ಕೇಳುವುದು. ಒಂದು ಎಕರೆ ಜಮೀನು ನೀಡುವಂತೆ ಕಳೆದ ವರ್ಷವೆ ತಹಸೀಲ್ದಾರ್‌ಗೆ ಆದೇಶಿಸಿದ್ದೇನೆ. ಮುತುವರ್ಜಿ ವಹಿಸಿ ಪಡೆದುಕೊಳ್ಳಬೇಕು. ದೇವಸ್ಥಾನವನ್ನು ಕಟ್ಟಿಸಿಕೊಳ್ಳಿ. ಯಾದವ, ಕುಂಚಿಟಿಗ ಸಮಾಜದವರು ಈಗಾಗಲೆ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆಂದು ಹೇಳಿದರು.31 ವರ್ಷಗಳ ಹಿಂದೆಯೇ ಶಾಸಕನಾಗಿ ಅಂದಿನಿಂದ ಇಲ್ಲಿಯವರೆಗೂ ಸಾರ್ವಜನಿಕರ ಬದುಕನ್ನು ಅರ್ಥಮಾಡಿಕೊಂಡು ಎಲ್ಲಿ, ಯಾರಿಗೆ ಏನು ಅನುಕೂಲ ಮಾಡಿದರೆ ಒಳ್ಳೆಯದಾಗುತ್ತದೆನ್ನುವ ಅರಿವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ತಾಳಿಕಟ್ಟೆಯಲ್ಲಿ 8 ದಿನಗಳ ಕಾಲ ನಡೆಯುವ ತೋಪು ಜಾತ್ರೆಗೆ ರಸ್ತೆ, ದೀಪ, ಕುಡಿಯುವ ನೀರಿಗಾಗಿ 30 ಕೋಟಿ ರು. ಖರ್ಚು ಮಾಡಲಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿ ತಾಯಂದಿರ ಮೇಲಿದೆ. ವಿದ್ಯೆ ಜೊತೆ ಸಂಸ್ಕಾರ ಕಲಿಸಿದಾಗ ಸಮಾಜದಲ್ಲಿ ಗೌರವದಿಂದ ಬಾಳಬಹುದು ಎಂದು ತಿಳಿಸಿದರು.
ಬಲಿಜ ಸಂಘದ ರಾಜ್ಯಾಧ್ಯಕ್ಷ ಬೆಂಗಳೂರಿನ ಎಂ.ಎನ್.ಮುನಿಕೃಷ್ಣ, ಹೊಳಲ್ಕೆರೆ ತಾಲೂಕು ಯೋಗಿನಾರೇಯಣ ಬಲಿಜ ಸಂಘದ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಪುರಸಭೆ ಅಧ್ಯಕ್ಷ ಎಲ್.ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ಎಚ್.ಆರ್.ನಾಗರತ್ನ ವೇದಮೂರ್ತಿ, ಡಾ.ಓಬಳೇಶ್‍ಘಟ್ಟಿ, ಎಸ್.ನರಸಿಂಹಮೂರ್ತಿ, ಎಂ.ಜೆ.ಸೂರ್ಯನಾರಾಯಣ, ಬಿ.ಆರ್.ಮಂಜುನಾಥ್, ಎಂ.ಕೆ.ಪ್ರಹ್ಲಾದ್, ಹನುಮಂತಪ್ಪ, ಅನುಗ್ರಹ ಶ್ರೀನಿವಾಸ್, ವಾಣಿಘಟ್ಟಿ ಕೊಂಡಪ್ಪ, ಗುರುರಾಜ್, ಸೋಮಶೇಖರಪ್ಪ ಹಾಗೂ ಬಲಿಜ ಸಮಾಜದ ಮುಖಂಡರು ಭಾಗವಹಿಸಿದ್ದರು.