ಸಾರಾಂಶ
ಭಟ್ಕಳ: ಇಲ್ಲಿನ ಲ್ಯಾಂಪ್ಸ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಸೆಂಟ್ರಿಂಗ್ ಕಾರ್ಮಿಕರ ಸಂಘಟನೆಯಿಂದ ಏರ್ಪಡಿಸಲಾದ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕ ನಿರೀಕ್ಷಕ ಗುರುಪ್ರಸಾದ ನಾಯ್ಕ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಕಾರ್ಮಿಕರು ಇಲಾಖೆಯ ಕಾರ್ಮಿಕ ಕಾರ್ಡುಗಳನ್ನು ಮಾಡಿಕೊಂಡು, ಅದರಲ್ಲಿ ಸಿಗುವ ಎಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು.
ನಗರ ಠಾಣೆಯ ಪಿಎಸ್ಐ ತಿಮ್ಮಪ್ಪ ಎಸ್.ಬೇಡುಮನೆ ಮಾತನಾಡಿ, ಬಾಲ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಬಳಸಿಕೊಳ್ಳಬಾರದು. ಕಾರ್ಮಿಕರು ಕೆಲಸಕ್ಕೆ ಹೋಗುವಾಗ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿಕೊಂಡು, ಚಾಲನಾ ಪರವಾನಗಿ ಇಟ್ಟುಕೊಂಡು ತಮ್ಮ ವಾಹನಗಳನ್ನು ಚಲಾಯಿಸಬೇಕು ಎಂದರು.ಮುರುಡೇಶ್ವರದ ಉದ್ಯಮಿ ಗೌರೀಶ ನಾಯ್ಕ ಮಾತನಾಡಿ, ಭಟ್ಕಳ ಸೆಂಟ್ರಿಂಗ್ ಕಾರ್ಮಿಕ ಸಂಘದ ಅಭಿವೃದ್ಧಿಗಾಗಿ ಪ್ರತಿ ತಿಂಗಳು 5 ಸಾವಿರ ವೈಯಕ್ತಿಕ ಧನಸಹಾಯ ನೀಡುವುದಾಗಿ ಘೋಷಿಸಿದರು.
ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಭಟ್ಕಳ ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ನಾಯ್ಕ, ಕಾರ್ಯದರ್ಶಿ ಸುರೇಶ ಪೂಜಾರಿ, ಭಟ್ಕಳ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ಸೆಂಟ್ರಿಂಗ್ ಕಾರ್ಮಿಕರು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸೆಂಟ್ರಿಂಗ್ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.
ತಾಲೂಕು ಪೇಂಟರ್ ಸಂಘದ ಅಧ್ಯಕ್ಷ ರಾಮ ನಾಯ್ಕ, ಟಿಪ್ಪರ್ ಮಾಲಕರ ಸಂಘದ ಅಧ್ಯಕ್ಷ ಸೈಯದ್ ಅಬ್ದುಲ್ ಅಜೀಜ್, ಸೆಂಟ್ರಿಂಗ್ ಕಾರ್ಮಿಕರ ಸಂಘದ ಉಪಾಧ್ಯಕ್ಷ ತಿಮ್ಮಯ್ಯ ನಾಯ್ಕ, ಸುಬ್ರಾಯ ನಾಯ್ಕ, ಕಾರ್ಮಿಕ ಕಚೇರಿಯ ಡಿಇಒ ಸೀಮಾ ನಾಯ್ಕ ಉಪಸ್ಥಿತರಿದ್ದರು.ಸಂಘದ ಗೌರವ ಅಧ್ಯಕ್ಷ ಕೇಶವ ಎ.ಆಚಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಿವರಾಮ ನಾಯ್ಕ ವರದಿ ವಾಚಿಸಿದರು. ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ ಸ್ವಾಗತಿಸಿ, ವಂದಿಸಿದರು.ಭಟ್ಕಳದಲ್ಲಿ ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು.