ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇಶದಲ್ಲಿ ಪ್ರತಿ ವರ್ಷ ದಿನದಿಂದ ದಿನಕ್ಕೆ ಹೆಚ್ಚು ಜನ ರೇಬೀಸ್ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತ ನಿರ್ಲಕ್ಷಿಸದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುನಾಥ ಡಿ.ಎನ್. ಹೇಳಿದರು.ಜಿಲ್ಲಾಡಳಿತ, ಜಿಪಂ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮೀಕ್ಷೆ ಘಟಕ ಬಾಗಲಕೋಟೆ ಸಹಯೋಗದೊಂದಿಗೆ ರಾಷ್ಟ್ರೀಯ ರೇಬೀಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಟ್ಟಿ ಮೆಡಿಕಲ್ & ಎಜುಕೇಶನ್ ಸೊಸೈಟಿಯ ಗೌರಮ್ಮ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ಚ ರೇಬೀಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರೇಬೀಸ್ ಕಾಯಿಲೆ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಸೆಪ್ಟೆಂಬರ್ 28 ಅನ್ನು ವಿಶ್ವ ರೇಬೀಸ್ ದಿನವೆಂದು ಆಚರಿಸಲಾಗುತ್ತದೆ. ರೇಬೀಸ್ ಗೆ ಮೊದಲು ಲಸಿಕೆ ಕಂಡು ಹಿಡಿದ ಲೂಯಿಪಾಶ್ಚರ್ ಮರಣ ಹೊಂದಿದ ದಿನವನ್ನು 2007ರಿಂದ ವಿಶ್ವ ರೇಬೀಸ್ ದಿನವೆಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ರೇಬೀಸ್ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮೂಲ ಆಶಯವಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ರೇಬೀಸ್ ರೋಗಕ್ಕೆ ತುತ್ತಾದ 17 ಸಾವಿರ ಜನರಿಗೆ ಚಿಕಿತ್ಸೆ ನೀಡಲಾಗಿದೆ. 3 ಜನ ಮೃತಪಟ್ಟಿದ್ದಾರೆ. ಆದ್ದರಿಂದ ಸಾರ್ವಜನಿಕರು ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಡಿತಕ್ಕೊಳಗಾದರೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ತೆರಳಿ ಆಂಟಿರೇಬೀಸ್ ಲಸಿಕೆ ಪಡೆಯಬೇಕು ಎಂದು ಸಾರ್ವಜನಿಕರಿಗೆ ರೇಬೀಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆಯನ್ನವರ ಮಾತನಾಡಿ, ರೇಬೀಸ್ ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ. ಶ್ವಾನಗಳ ಕಡಿತ ಮತ್ತು ಲಾಲಾರಸದ ಸಂಪರ್ಕದಿಂದ ಮನುಷ್ಯನಿಗೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಮಿದುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಾಯಿ ಕಡಿತದ ಬಗ್ಗೆ ಸಮುದಾಯಕ್ಕೆ ನಾಯಿ ಕಡಿತ ಪರಿಣಾಮ ಮತ್ತು ನಿಯಂತ್ರಣ ದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಜಿಲ್ಲಾ ಸೋಂಕು ಶಾಸ್ತ್ರಜ್ಞೆ ಡಾ.ಸೀಮಾ ಹುದ್ದಾರ ಮಾತನಾಡಿ, ಪ್ರಾಣಿ ಜನ್ಯರೋಗ ಒಂದು ಮಾರಣಾಂತಿಕವಾಗಿದೆ. ಪ್ರಾಣಿಗಳು ಕಡಿಯುವುದರಿಂದ ಮತ್ತು ಪರಚುವುದರ ಮೂಲಕ ಕಾಯಿಲೆ ಉಲ್ಬಣಗೊಳ್ಳುವುದು. ಆದ್ದರಿಂದ ಸಮುದಾಯದಲ್ಲಿ ರೇಬೀಸ್ ರೋಗದ ಬಗ್ಗೆ ಆರೋಗ್ಯ ಇಲಾಖೆಯಿಂದ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಗೌರಮ್ಮ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಾಚಾರ್ಯ ವಿದ್ಯಾಧರ ಜಾಡರ, ತಾಲೂಕು ಆರೋಗ್ಯಾಧಿಕಾರಿ ಡಾ.ಸರಸ್ವತಿ ಮಾಗಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಪಿ.ನಾಯ್ಕರ, ಎನ್ಟಿಸಿಪಿಯ ಶಶಿಧರ ಕುಮಟಳ್ಳಿ ಸೇರಿದಂತೆ ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ ಸಿಬ್ಬಂದಿ,ವಿದ್ಯಾರ್ಥಿಗಳು ಇದ್ದರು.