ಯುವಕರು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಿ

| Published : Jan 21 2025, 12:34 AM IST

ಸಾರಾಂಶ

ಪ್ರಾತ್ಯಕ್ಷಿಕೆ ಬೆಳೆ ಬೆಳೆದು ರೈತರಿಗೆ ಅರಿವು ಮೂಡಿಸುವ ಕೃಷಿ ವಸ್ತು ಪ್ರದರ್ಶನಗಳು ಅನ್ನದಾತನಿಗೆ ಹೆಚ್ಚು ಸಹಕಾರಿಯಾಗಲಿದ್ದು ಕಡಿಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಬೆಳೆ ತರುವಂತಹ ಕೃಷಿ ಮಾಡಲು ಹೆಚ್ಚು ಸಹಕಾರಿಯಾಗುತ್ತದೆ. ಯುವಕರು ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಕೃಷಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ಪ್ರಾತ್ಯಕ್ಷಿಕೆ ಬೆಳೆ ಬೆಳೆದು ರೈತರಿಗೆ ಅರಿವು ಮೂಡಿಸುವ ಕೃಷಿ ವಸ್ತು ಪ್ರದರ್ಶನಗಳು ಅನ್ನದಾತನಿಗೆ ಹೆಚ್ಚು ಸಹಕಾರಿಯಾಗಲಿದ್ದು ಕಡಿಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಬೆಳೆ ತರುವಂತಹ ಕೃಷಿ ಮಾಡಲು ಹೆಚ್ಚು ಸಹಕಾರಿಯಾಗುತ್ತದೆ. ಯುವಕರು ಕೃಷಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಕೃಷಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 22ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಶಿರಾ ಕ್ಷೇತ್ರಕ್ಕೆ ಹೇಮಾವತಿ ನೀರು ಹರಿಸುತ್ತೇನೆಂದು ಕಳೆದ 22 ವರ್ಷಗಳ ಹಿಂದೆ ಶ್ರೀ ಓಂಕಾರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಹೇಳಿದ್ದೆ, ಆ ದೈವ ಸಂಕಲ್ಪದಂತೆ ತಾಲೂಕಿಗೆ ಹೇಮಾವತಿ ನೀರಿನ ಜೊತೆಗೆ, ಭದ್ರಾ, ಎತ್ತಿನಹೊಳೆ ನೀರಾವರಿ ಯೋಜನೆಗಳು ಅನುಷ್ಠಾನ ಮಾಡುವ ಮೂಲಕ ಶಿರಾದಲ್ಲಿ ನದಿಗಳ ತ್ರಿವೇಣಿ ಸಂಗಮವಾಗಲಿದೆ ಎಂದರು. ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ಕಳೆದ 22 ವರ್ಷಗಳಿಂದ ಶ್ರೀಮಠ ರೈತರಿಗೆ ಕೃಷಿಯ ನೂತನ ತಾಂತ್ರಿಕತೆ ಬಗ್ಗೆ ಪರಿಣಾಮಕಾರಿಯಾಗಿ ವಸ್ತು ಪ್ರದರ್ಶನದಲ್ಲಿ ಅರಿವು ಮೂಡಿಸಿದ ಕಾರಣ ಹೆಚ್ಚು ಹೆಚ್ಚು ರೈತರಿಗೆ ಇದರ ಪ್ರಯೋಜನವಾಗಿದೆ. ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಅಪ್ಪರ ಭದ್ರ ನೀರಾವರಿ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಬರಡಾಗಿರುವ ನಾಡಿಗೆ ನೀರು ಹರಿಸುವಂತಹ ಇಚ್ಛಾಶಕ್ತಿ ಸರ್ಕಾರ ಹೊಂದಬೇಕಿದೆ. ಶ್ರೀ ಓಂಕಾರೇಶ್ವರ ಸ್ವಾಮಿ ನಾಡಿಗೆ ಸುಭಿಕ್ಷ ಕರುಣಿಸಿ ಎಲ್ಲರ ಬದುಕಿನಲ್ಲಿ ನಮ್ಮ ಚೈತನ್ಯದ ಬೆಳಕು ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಆಂಧ್ರಪ್ರದೇಶದ ಮಾಜಿ ಸಚಿವ ರಘುವೀರರೆಡ್ಡಿ ಮಾತನಾಡಿ ಶ್ರೀಗಳ ಒತ್ತಾಸೆಯಂತೆ ಆಂದ್ರಪ್ರದೇಶದ ಮಡಕಸಿರಾ ಮತ್ತು ಶಿರಾ ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಅನುಷ್ಠಾನಗೊಂಡು ಕೆರೆಗಳು ಭರ್ತಿಯಾಗುತ್ತಿವೆ. ಇಷ್ಟು ದಿನ ನೀರು ಕೊಡಿ ಎನ್ನುವ ರೈತ ಸಮುದಾಯ ಕೃಷಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಕಳವಳಕಾರಿ ಸಂಗತಿ. ಯುವ ಸಮೂಹ ಕೃಷಿ ಬಗ್ಗೆ ಆಸಕ್ತಿ ಹೊಂದಲು ಸರ್ಕಾರಗಳು ವಿನೂತನ ಯೋಜನೆಗಳನ್ನು ರೂಪಿಸಬೇಕು ಎಂದರು. ತುಮಕೂರು ಹಾಲು ಒಕ್ಕೂಟದ ನಿರ್ದೆಶಕ ಎಸ್.ಆರ್.ಗೌಡ ಮಾತನಾಡಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ರೈತರಿಗೆ ಹೆಚ್ಚು ಅನುಕೂಲವಾಗುವ ರೀತಿ ರೇಷ್ಮೆ, ಕೃಷಿ, ತೋಟಗಾರಿಕೆ ಪ್ರಾತ್ಯಕ್ಷಿಕ ಬೆಳೆ ಜೊತೆಗೆ, ಮಳಿಗೆ ಗಳಲ್ಲಿ ಅಗತ್ಯವಾಗಿ ಬೇಕಿರುವ ಮಾಹಿತಿಯನ್ನು ನೀಡಿ ಅಧಿಕಾರಿಗಳು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ. ವಸ್ತುಪ್ರದರ್ಶನದಲ್ಲಿ ಎಲ್ಲ ರೈತರು ಪಾಲ್ಗೊಂಡು ವೀಕ್ಷಣೆ ಮಾಡಿ ನೂತನ ತಾಂತ್ರಿಕತೆ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಸ್.ರಾಮಕೃಷ್ಣ, ಗೋವಿಂದರಾಜು, ಆಡಿಷನಲ್ ಎಸ್ಪಿ ಮರಿಯಪ್ಪ, ಸೂಡ ಅಧ್ಯಕ್ಷ ಪಿ. ಅರ್. ಮಂಜುನಾಥ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಎನ್. ಮೂರ್ತಿ, ನಾದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ತಾಪಂ ಮಾಜಿ ಸದಸ್ಯ ಕೆ. ಎಂ.ಶ್ರೀನಿವಾಸ ಸೇರಿದಂತೆ ಹಲವರು ಹಾಜರಿದ್ದರು.