ಚಾಲನಾ ಪರವಾನಗಿ ಪಡೆದುಕೊಂಡರೆ ಸಾಲದು ರಸ್ತೆ ನಿಯಮ ಪಾಲಿಸಿ: ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ

| Published : Jan 19 2024, 01:45 AM IST

ಚಾಲನಾ ಪರವಾನಗಿ ಪಡೆದುಕೊಂಡರೆ ಸಾಲದು ರಸ್ತೆ ನಿಯಮ ಪಾಲಿಸಿ: ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ 11700 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದು, 48 ಸಾವಿರ ಜನರು ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸಾರ್ವಜನಿಕರ ರಕ್ಷಣೆಗೆಗಾಗಿ ಕಾನೂನು ಇದೆಯೇ ಹೊರತು ತೊಂದರೆ ಮಾಡಲು ಅಲ್ಲ ಎಂದು ಡಿವೈಎಸ್‌ಪಿ ಡಾ. ಗಿರೀಶ ಭೋಜಣ್ಣನವರ ಹೇಳಿದರು.

ನಗರದ ಸಹಾಯಕ ಪ್ರಾದೇಶಿಕ ಅಧಿಕಾರಿಗಳ (ಎಆರ್‌ಟಿಒ) ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಪ್ತಾಹ ಸಮಾರಂಭ ಉದ್ಟಾಟಿಸಿ ಅವರು ಮಾತನಾಡಿದರು. ವಾಹನ ಚಾಲನಾ ಪರವಾನಗಿ ಪಡೆದುಕೊಂಡರೆ ಸಾಲದು ರಸ್ತೆ ನಿಯಮ ಪಾಲನೆ ಮಾಡಬೇಕಿದೆ. ವಾಹನ ಚಾಲನೆಯ ವೇಳೆ ಹೆಲ್ಮೆಟ್ ಹಾಕಬೇಕು. ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ವಾಹನ ಚಾಲನೆ ಮಾಡಬೇಡಿ. ರಾಜ್ಯದಲ್ಲಿ 11700 ಮಂದಿ ಮೃತಪಟ್ಟಿದ್ದು, 48 ಸಾವಿರ ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಧಿಕಾರಿಗಳು ಅಪಘಾತ ನಿಯಂತ್ರಣ ಮಾಡಲು ಸಾರ್ವಜನಿಕರು ಕೈಜೋಡಿಸಬೇಕು. ಇದರಿಂದ ದೇಶ ಸುಧಾರಣೆಯಾಗಲು ಸಾಧ್ಯವಿದೆ. ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಸಾವನ್ನಪ್ಪುತ್ತಿದ್ದು ಆ ಪೈಕಿ ಬೈಕ್‌ಗಳಲ್ಲಿ ಓಡಾಡುವ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಪ್ರತಿಯೊಬ್ಬರು ಜಾಗೃತಿಯನ್ನು ವಹಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಆರ್‌ಟಿಒ ಭರತಸಿಂಗ್ ಕಾಳಿಸಿಂಗ್ ಮಾತನಾಡಿ, ವಾಹನ ಸವಾರರ ಒಂದು ಕ್ಷಣದ ನಿರ್ಲಕ್ಷ್ಯದಿಂದ ಅಮೂಲ್ಯವಾದ ಜೀವ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ರಸ್ತೆ ಸುರಕ್ಷತೆ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕಿದೆ. ಚಿಹ್ನೆ ಹಾಗೂ ಸಹ್ನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ವಾಹನ ಚಾಲನೆ ವೇಳೆ ಅವುಗಳನ್ನು ಪಾಲನೆ ಮಾಡುವ ಮೂಲಕ ಅಪಘಾತಗಳು ಸಂಭವಿಸುವುದನ್ನು ತಡೆಗಟ್ಟಬೇಕು ಎಂದರು.

ಕುಮಾರಪಟ್ಟಣಂ ಸಿಪಿಐ ಇ. ಆನಂದ ಮಾತನಾಡಿ, ಬಹುತೇಕ ಬೈಕ್ ಅಪಘಾತಗಳಲ್ಲಿ ಸವಾರರು ತಲೆಗೆ ಗಾಯವಾಗಿ ಸಾವನ್ನಪ್ಪುವುದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಹಿಂದೇಟು ಹಾಕಬಾರದು. ದೇವಾನುದೇವತೆಗಳು ತಲೆಗೆ ಕೀರಿಟ ಧರಿಸಿರುವ ಚಿತ್ರಗಳನ್ನು ನಾವೆಲ್ಲ ನೋಡಿದ್ದೇವೆ. ಅವರ ಭಕ್ತರಾದ ನಾವು ಕೂಡ ಹೆಲ್ಮೆಟ್ ಧರಿಸಿ ಅಮೂಲ್ಯ ಜೀವ ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಹಿರಿಯ ಮೋಟಾರ್‌ ವಾಹನ ನಿರೀಕ್ಷಕ ಅನಿಲ ಮಾಸೂರ, ವಿಜಯ ಪಾಟೀಲ ಚಾಲನಾ ತರಬೇತಿ ಶಾಲೆ ಪ್ರಾಚಾರ್ಯ ಪ್ರಭುಗೌಡ ಪಾಟೀಲ, ಕಚೇರಿ ಅಧೀಕ್ಷಕ ಟಿ.ಕೆ. ನಾಗರಾಜ, ಜಗದೀಶ ಗವಳಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅತಿಥಿಗಳು ಸಂಚಾರಿ ನಿಯಮಗಳ ಪೋಸ್ಟರ್‌ನ್ನು ಬಿಡುಗಡೆ ಮಾಡಿದರು.