ಸಾರಾಂಶ
ಮದುವೆಯಾಗಿದ್ದರೂ ಮತ್ತೊಂದು ಮದುವೆಗೆ ರೆಡಿ ಆಗಿದ್ದವನನ್ನು ಯುವತಿಯ ತಂದೆಯೇ ಚಟ್ಟಕ್ಕೆ ಏರಿಸಿದ ಘಟನೆ ಹಾಲ್ಕುರಿಕೆ ರಸ್ತೆಯಲ್ಲಿರುವ ಧನಲಕ್ಷ್ಮಿ ಕೊಬ್ಬರಿ ಫ್ಯಾಕ್ಟರಿ ಬಳಿ ನಡೆದಿದೆ. ಕೊಲೆಯಾದ ಯುವಕನನ್ನು ತಾಲೂಕಿನ ಈಡೇನಹಳ್ಳಿಪಾಳ್ಯದ ಚೇತನ್ (೪೫) ಎಂದು ಗುರುತಿಸಲಾಗಿದೆ.
ತಿಪಟೂರು: ಮದುವೆಯಾಗಿದ್ದರೂ ಮತ್ತೊಂದು ಮದುವೆಗೆ ರೆಡಿ ಆಗಿದ್ದವನನ್ನು ಯುವತಿಯ ತಂದೆಯೇ ಚಟ್ಟಕ್ಕೆ ಏರಿಸಿದ ಘಟನೆ ಹಾಲ್ಕುರಿಕೆ ರಸ್ತೆಯಲ್ಲಿರುವ ಧನಲಕ್ಷ್ಮಿ ಕೊಬ್ಬರಿ ಫ್ಯಾಕ್ಟರಿ ಬಳಿ ನಡೆದಿದೆ. ಕೊಲೆಯಾದ ಯುವಕನನ್ನು ತಾಲೂಕಿನ ಈಡೇನಹಳ್ಳಿಪಾಳ್ಯದ ಚೇತನ್ (೪೫) ಎಂದು ಗುರುತಿಸಲಾಗಿದೆ.
ಚೇತನ್ ನಗರದ ಗುಬ್ಬಿ ಲೇಔಟ್ ನಿವಾಸಿ ಎಂದು ಹೇಳಲಾಗಿದ್ದು, ತೆಂಗಿನ ಕಾಯಿ ಟ್ರಾನ್ಸ್‌ಪೋರ್ಟ್ ವ್ಯವಹಾರ ಮಾಡುತ್ತಿದ್ದ. ಈತ ಹಾಗೂ ತಾಲೂಕಿನ ಆಲೂರು ಗ್ರಾಮದ ಯುವತಿಯೊಬ್ಬರು ಪ್ರೀತಿ ಮಾಡುತ್ತಿದ್ದು ಇದು ಮದುವೆ ಹಂತದಲ್ಲೂ ಇತ್ತು ಎಂದು ಹೇಳಲಾಗುತ್ತಿದೆ. ಈತನಿಗೆ ಈ ಮೊದಲೇ ಮದುವೆಯಾಗಿ ಒಂದು ಮಗುವೂ ಸಹ ಇರುವುದು ತಿಳಿದು ಬಂದಿದೆ. ಕಳೆದ ರಾತ್ರಿ ಈತ ಧನಲಕ್ಷ್ಮಿ ಕಾಯಿ ಫ್ಯಾಕ್ಟರಿ ಬಳಿ ಇರುವ ಯುವತಿಯ ತಂದೆಯ ಅಂಗಡಿ ಬಳಿ ಹೋಗಿ ಹೋಗಿ ನಿಮ್ಮ ಮಗಳನ್ನು ನನಗೆ ಕೊಡಿ ನಾವು ಮದುವೆಯಾಗುತ್ತೇವೆ ಎಂದು ಕೇಳಿದ್ದು, ಈ ಸಂದರ್ಭದಲ್ಲಿ ಯುವತಿಯ ಮನೆಯವರಿಗೂ ಈತನಿಗೂ ಗಲಾಟೆ ನಡೆದು ಅಂತಿಮವಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನನ್ನು ಯುವತಿಯ ತಂದೆಯೇ ಕೊಲೆ ಮಾಡಿ ಹೊನ್ನವಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆಂದು ತಿಳಿದು ಬಂದಿದೆ. ನಂತರ ಸ್ಥಳಕ್ಕೆ ಡಿವೈಎಸ್‌ಪಿ ವಿನಾಯಕ ಶೆಟಗೇರಿ, ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧರಾಮೇಶ್ವರ, ವಿಶೇಷ ತನಿಖಾ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.