ಮಳೆಯಿಂದ ಮೈದುಂಬಿ ಹರಿಯುತ್ತಿರುವ ಘಟಪ್ರಭೆ

| Published : Jun 12 2024, 12:34 AM IST

ಸಾರಾಂಶ

ಬಿರು ಬೇಸಿಗೆಯಿಂದ ಬರಿದಾಗಿ ಕಳಾಹೀನವಾಗಿದ್ದ ಘಟಪ್ರಭೆ ನದಿ ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ನೀರು ಹರಿದುಬರುತ್ತಿರುವುದರಿಂದ ಒಡಲು ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಕಲಾದಗಿ

ಬಿರು ಬೇಸಿಗೆಯಿಂದ ಬರಿದಾಗಿ ಕಲಾಹೀನವಾಗಿದ್ದ ಘಟಪ್ರಭೆ ನದಿ ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ನೀರು ಹರಿದುಬರುತ್ತಿರುವುದರಿಂದ ಒಡಲು ತುಂಬಿ ಹರಿಯುತ್ತಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.

ಹಿಡಕಲ್ ಡ್ಯಾಂನಿಂದ ಎರಡ್ಮೂರು ಬಾರಿ ಬಿಟ್ಟ ನೀರಿನಿಂದ ಆಗಾಗ್ಗೆ ಸಮೀಪದ ಕಲಾದಗಿ-ಕಾತರಕಿ ಬ್ಯಾರೇಜ್ ಒಂದಿಷ್ಟು ತುಂಬಿತ್ತಾದರೂ, ಅದರ ಕೆಳಭಾಗದಲ್ಲಿ ನೀರು ಹರಿದಿದ್ದು ಬಹಳ ಕಡಿಮೆ. ಇದರಿಂದಾಗಿ ಕೆಳ ಭಾಗದ ಜನಜಾನುವಾರುಗಳ ಕುಡಿಯುವ ನೀರಿಗೆ ತೊಂದರೆ ಉಂಟಾಗಿತ್ತು.

ಕಳೆದ ಗುರುವಾರ ಸಂಪೂರ್ಣವಾಗಿ ಬರಿದಾಗಿದ್ದ ಕಲಾದಗಿ-ಕಾತರಕಿ ಬ್ಯಾರೇಜ್‌ನ ಕೆಳಭಾಗದ ನದಿ ಪ್ರದೇಶ ಮೇಲ್ಬಾಗದಿಂದ ಅಪಾರ ನೀರಿನ ಹರಿವಿನಿಂದ ಬ್ಯಾರೇಜ್‌ ಭರ್ತಿಯಾಗಿ ಮೇಲೆ ಹರಿಯುತ್ತಿದ್ದು, ಕೇವಲ ಎರಡುದಿನದಲ್ಲಿ ಮೈತುಂಬಿಕೊಂಡಿದೆ. ಬ್ಯಾರೇಜ್ ಹಾಗು ಸೇತುವೆ ದಾಟಿ ನೀರು ಭೋರ್ಗೆಯುತ್ತಿದೆ.

ರೈತರಲ್ಲಿ ಆತಂಕ: ಕಲಾದಗಿ-ಕಾತರಕಿ ಬ್ಯಾರೇಜ್ ಸಂಪೂರ್ಣವಾಗಿ ತುಂಬಿದ್ದು ಮೇಲ್ಬಾಗದಿಂದ ಬರುತ್ತಿರುವ ನೀರು ಬ್ಯಾರೇಜ್‌ನ ಆಸುಪಾಸಿನ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡುವ ಆತಂಕ ರೈತರನ್ನು ಕಾಡುತ್ತಿದೆ. ಬೇಸಿಗೆಯಲ್ಲಿ ನದಿಗೆ ಬಿಟ್ಟ ನೀರು ನಿಲ್ಲಿಸಲು ಹಾಕಿಸಿದ್ದ ಬ್ಯಾರೇಜ್‌ ಗೇಟುಗಳನ್ನು ತೆಗೆದು ಹೆಚ್ಚಿನ ನೀರು ಮುಂದೆ ಹರಿಯುವಂತೆ ನೋಡಿಕೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ. ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭೆಯಲ್ಲಿ ನೀರಿನ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿದ್ದು, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ.