ಸಾರಾಂಶ
ಗಜಲ್ ಗಳ ಮೂಲಕ ಪ್ರೀತಿ, ಪ್ರೇಮಾನುಭೂತಿಯಿಂದ ತುಂಬಿದ ನವಿರಾದ ಭಾವನೆಗಳನ್ನು, ವಿರಹ ವೇದನೆಯ ನೋವುಗಳನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಡುವುದರ ಜೊತೆಗೆ ಹಸಿವು, ಬಡತನ, ಅವಮಾನಗಳಿಗೂ ಸಂವೇದನಾಶೀಲವಾಗಿ ಸ್ಪಂದಿಸಬಹುದು
ಕನ್ನಡಪ್ರಭ ವಾರ್ತೆ ಮೈಸೂರು
ಕವಿ ಮತ್ತು ಬರಹಗಾರ ಸಾಮಾಜಿಕಮುಖಿಯಾಗಿ ಬರೆಯಬೇಕು ಎಂದು ಹಾಯ್ಕು ಮತ್ತು ಗಜಲ್ ಕಾರ ಸಿದ್ದರಾಮ ಹೊನ್ಕಲ್ ತಿಳಿಸಿದರು.ನಗರದ ರೋಟರಿ ಸಭಾಂಗಣದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಬಿ. ಸಂತೋಷ್ ಅವರ ‘ನೂಪುರ’ ಹಾಯ್ಕುಗಳ ಸಂಕಲನ, ಬಿ. ಶೋಭಾ ಅವರ ‘ಭಾವರಂಗದ ಪಯಣ’ ಕವನ ಸಂಕಲನ ಮತ್ತು ಸಿ. ವಾಣಿ ರಾಘವೇಂದ್ರ ಅವರ ‘ಡಾ. ಶ್ವೇತಾ’ ಅನುವಾದಿತ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ಲೇಖಕಭಾವನಾತ್ಮಕವಾಗಿ ಬದುಕುವ ಜೀವಿ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸದೆ ಹೋದರೆ ಮನುಷ್ಯ ಏಕಾಂಗಿ ಆಗುತ್ತಾನೆ. ಕವಿ ಮತ್ತು ಲೇಖಕರು ತಮ್ಮ ಜೀವಿತದ ಕಾಲಮಾನದಲ್ಲಿ ಸಾಕ್ಷಿ ಪ್ರಜ್ಞೆಯಾಗಿ ನಿಲ್ಲುತ್ತಾರೆ. ಲೇಖಕರು ತಮ್ಮ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದು ನೂರಾರು ವರ್ಷಗಳ ಕಾಲ ಉಳಿಯುತ್ತದೆ ಎಂದು ಅವರು ಹೇಳಿದರು.ಗಜಲ್ ಗಳ ಮೂಲಕ ಪ್ರೀತಿ, ಪ್ರೇಮಾನುಭೂತಿಯಿಂದ ತುಂಬಿದ ನವಿರಾದ ಭಾವನೆಗಳನ್ನು, ವಿರಹ ವೇದನೆಯ ನೋವುಗಳನ್ನು ಅತ್ಯಂತ ಸೊಗಸಾಗಿ ಕಟ್ಟಿಕೊಡುವುದರ ಜೊತೆಗೆ ಹಸಿವು, ಬಡತನ, ಅವಮಾನಗಳಿಗೂ ಸಂವೇದನಾಶೀಲವಾಗಿ ಸ್ಪಂದಿಸಬಹುದು ಎಂದರು.
ಇದೇ ವೇಳೆ ಸಿದ್ದರಾಮ ಹೊನ್ಕಲ್ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಸಿ. ವಾಣಿ ರಾಘವೇಂದ್ರ ಅವರಿಗೆ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ, ಕೆ. ಪ್ರೇಮ್ ಕುಮಾರ್ ಅವರಿಗೆ ಶಿಕ್ಷಣ ರತ್ನ, ಸುಜಾತಾ ರವೀಶ್ ಅವರಿಗೆ ಸಾಹಿತ್ಯ ಶ್ರೀ, ಆರ್. ಚಂದ್ರಶೇಖರ್, ಚಿನ್ಮಯ್ ಎಂ. ನಾಯಕ್, ಪಿ. ಅನ್ನಪೂರ್ಣಿ ಅವರಿಗೆ ಬಾಲಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಹಿರಿಯ ಕವಯತ್ರಿ ಡಾ. ಲತಾ ರಾಜಶೇಖರ್, ಕೃತಿಕಾರರಾದ ಎಂ.ಬಿ. ಸಂತೋಷ್, ಬಿ. ಶೋಭಾ, ಸಿ. ವಾಣಿ ರಾಘವೇಂದ್ರ, ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಎ. ಹೇಮಗಂಗಾ, ಸಂಘಟನಾ ಕಾರ್ಯದರ್ಶಿ ಕೆ. ಪ್ರೇಮ್ ಕುಮಾರ್ ಮೊದಲಾದವರು ಇದ್ದರು.