16ರಂದು ಒಳಮೀಸಲಾತಿ ಜಾರಿಗೊಳಿಸದಿದ್ದರೆ ಶಾಸಕ, ಸಚಿವ, ಸಂಸದರಿಗೆ ಘೇರಾವ್

| Published : Aug 14 2025, 01:00 AM IST

ಸಾರಾಂಶ

ನ್ಯಾ. ನಾಗಮೋಹನದಾಸ್ ಮೀಸಲಾತಿ ಸಮಿಕ್ಷೆ ಕೈಗೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಮಾದಿಗ ಸಮುದಾಯ ಹಿಂದುಳಿದಿದೆ ಎಂಬ ವರದಿ ಸಿದ್ಧಗೊಳಿಸಿ ಸರ್ಕಾರಕ್ಕೆ ನೀಡಿದ್ದು, ಆ ಪ್ರಕಾರ ಆ. 16ರಂದು ಸರ್ಕಾರ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಶಾಸಕ, ಸಚಿವ, ಸಂಸದರ ಮನೆ ಮುಂದೆ ಘೇರಾವ್‌ ಹಾಕಲಾಗುವುದು ಎಂದು ಮಾದಿಗ ಸಮುದಾಯದ ಹಿರಿಯ ಮುಖಂಡ ಎಚ್.ಡಿ. ಪೂಜಾರ ಎಚ್ಚರಿಸಿದರು.

ಮುಂಡರಗಿ: ನ್ಯಾ. ನಾಗಮೋಹನದಾಸ್ ಮೀಸಲಾತಿ ಸಮಿಕ್ಷೆ ಕೈಗೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಮಾದಿಗ ಸಮುದಾಯ ಹಿಂದುಳಿದಿದೆ ಎಂಬ ವರದಿ ಸಿದ್ಧಗೊಳಿಸಿ ಸರ್ಕಾರಕ್ಕೆ ನೀಡಿದ್ದು, ಆ ಪ್ರಕಾರ ಆ. 16ರಂದು ಸರ್ಕಾರ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಶಾಸಕ, ಸಚಿವ, ಸಂಸದರ ಮನೆ ಮುಂದೆ ಘೇರಾವ್‌ ಹಾಕಲಾಗುವುದು ಎಂದು ಮಾದಿಗ ಸಮುದಾಯದ ಹಿರಿಯ ಮುಖಂಡ ಎಚ್.ಡಿ. ಪೂಜಾರ ಎಚ್ಚರಿಸಿದರು.

ಅವರು ಬುಧವಾರ ಈ ಕುರಿತು ಮಾದಿಗ ಸಮುದಾಯದ ಬಾಂಧವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್‌ಸಿಯಲ್ಲಿ 101 ಜಾತಿಗಳಿದ್ದು, ಅದರಲ್ಲಿ ಮಾದಿಗ ಸಮುದಾಯದವರು 37 ಲಕ್ಷಕ್ಕೂ ಅಧಿಕವಾಗಿದ್ದಾರೆ. ಈ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ನೀಡಬೇಕು. ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ. 7ರಷ್ಟು ಮೀಸಲಾಗಿ ನೀಡಬೇಕು. ಇಂದಿನ ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಈ ಭರವಸೆ ನೀಡುವ ಜತೆಗೆ ತನ್ನ ಪಕ್ಷದ ಪ್ರಣಾಳಿಕೆಯಲ್ಲಿಯೂ ತಿಳಿಸಿತ್ತು. ಇದೀಗ ಇದು ಈಡೇರದಿದ್ದರೆ ಬರುವ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು. ಅದಕ್ಕೆ ಅವಕಾಶ ನೀಡದೆ ಆ. 16ರಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಂಡು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದರು.

ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಸೋಮಣ್ಣ ಹೈತಾಪುರ ಮಾತನಾಡಿ, ಕಳೆದ ಮೂರು ದಶಕಗಳಿಂದ ರಾಜ್ಯದ ಮಾದಿಗ ಸಮುದಾಯರವರು ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಸರ್ಕಾರ ರಚನೆಯಾದ ಕೂಡಲೇ ಒಳಮೀಸಲಾತಿ ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿತ್ತು. ಈ ಬೇಡಿಕೆ ಇದುವರೆಗೂ ಈಡೇರಿಲ್ಲ. ಆ. 16ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಯುವ ಮುಖಂಡ ನಿಂಗರಾಜ ಹಾಲಿನವರ ಮಾತನಾಡಿ, ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಒಳಮೀಸಲಾತಿ ಜಾರಿಯ ಆದೇಶ ಬಂದಿದ್ದು, ರಾಜ್ಯದಲ್ಲಿಯೂ ಯಥಾವತ್ತಾಗಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಡಿಎಸ್‌ಎಸ್ ಸಂಚಾಲಕ ದುರಗಪ್ಪ ಹರಿಜನ, ಡಿ.ಜಿ. ಪೂಜಾರ, ನಿಂಗರಾಜ ಸ್ವಾಗಿ, ಸಂತೋಷ ಹಡಗಲಿ, ಪ್ರವೀಣ ವಡ್ಡಟ್ಟಿ, ಸೋಮಣ್ಣ ತಾಮ್ರಗುಂಡಿ, ನಿಂಗರಾಜ ಮೇಗಲಮನಿ, ನಿಂಗರಾಜ ಹರಿಜನ, ಚಂದ್ರು ಪೂಜಾರ ಉಪಸ್ಥಿತರಿದ್ದರು.