ಆಹಾರ ಪದ್ಧತಿ ಬದಲಾವಣೆಯಿಂದ ಮನುಷ್ಯರಲ್ಲಿ ಜಿಐ ಸೋಂಕು : ಜಠರ ಮತ್ತು ಕರುಳಿನ ಸಮಸ್ಯೆಗಳ ಹೆಚ್ಚಳ

| Published : Jul 19 2024, 12:54 AM IST / Updated: Jul 19 2024, 01:26 PM IST

dal chawal

ಸಾರಾಂಶ

ಜಿಐ ಸೋಂಕುಗಳನ್ನು ತಪ್ಪಿಸಲು ಬೇಯಿಸಿದ ಮತ್ತು ಉತ್ತಮವಾಗಿ ಸಂರಕ್ಷಿಸಲಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ.  

 ಮಂಡ್ಯ : ಪ್ರಸ್ತುತ ಆಹಾರ ಪದ್ಧತಿ ಮತ್ತು ಆಹಾರ ಉತ್ಪನ್ನಗಳ ಕಲಬೆರಕೆಯಿಂದಾಗಿ ಜಿಐ ಸೋಂಕುಗಳು ಮತ್ತು ಆಹಾರ ವಿಷವು ಆತಂಕಕಾರಿಯಾಗಿ ಆಗಾಗ್ಗೆ ಸಂಭವಿಸುತ್ತದೆ ಎಂದು ಮೈಸೂರು ಮಣಿಪಾಲ್‌ ಆಸ್ಪತ್ರೆಯ ಮೆಡಿಕಲ್‌ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಾಟಾಲಜಿಸ್ಟ್‌ ಕನ್ಸಲ್ಟೆಂಟ್‌ ಡಾ.ಆರ್‌.ನಿಶ್ಚಯ್‌ ತಿಳಿಸಿದರು.

ಸಮಗ್ರ ಜಿಐ ಆರೈಕೆ-ಈ ಸಮಯದ ಅಗತ್ಯ ಕುರಿತು ಮಾಹಿತಿ ನೀಡಿದ ಅವರು, ಹೊಟ್ಟೆನೋವು, ಉಬ್ಬುವುದು, ಅತಿಸಾರ, ಮಲಬದ್ಧತೆ, ವಾಕರಿಕೆ ಮತ್ತು ವಾಂತಿಯಂತಹ ಕಡಿಮೆ ತೀವ್ರವಾದ ಸಮಸ್ಯೆಗಳಿಂದ ಹಿಡಿದು ಜಠರ ಹುಣ್ಣು, ಕಾಯಿಲೆ, ಗ್ಯಾಸ್ಟ್ರೋಸೊಫೇಜಿಲ್‌ ರಿಫ್ಲೆಕ್ಸ್‌ ಕಾಯಿಲೆ ಉರಿಯೂತದ ಕರುಳಿನ ಕಾಯಿಲೆಗಳು ಅಲ್ಸರೇಟಿವ್‌ ಕೊಲೈಟಿಸ್‌ ಮತ್ತು ಕ್ರೋನ್ಸ್‌ ಕಾಯಿಲೆಯಂತಹ ಹೆಚ್ಚು ಗಂಭೀರವಾದ ಜಿಐ ಸಮಸ್ಯೆಗಳು ಮತ್ತು ಯಕೃತ್ತಿನ ಆರೋಗ್ಯ ಕಾಳಜಿಯ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಚರ್ಚಿಸಿದರು.

ಜಿಐ ಸೋಂಕುಗಳನ್ನು ತಪ್ಪಿಸಲು ಬೇಯಿಸಿದ ಮತ್ತು ಉತ್ತಮವಾಗಿ ಸಂರಕ್ಷಿಸಲಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಯಾವುದೇ ಸೋಂಕು ಇಲ್ಲದೆಯೂ ಕೂಡ ಜಠರ ಮತ್ತು ಕರುಳಿನ ಸಮಸ್ಯೆಗಳ ಹೆಚ್ಚಳವನ್ನು ಸಹ ನಾವು ಗಮನಿಸುತ್ತಿದ್ದೇವೆ. ಬದಲಾಗುತ್ತಿರುವ ಜೀವನಶೈಲಿ ಮತ್ತು ಅದರಿಂದ ಉಂಟಾಗುವ ಒತ್ತಡ ಈ ರೀತಿಯ ಸಮಸ್ಯೆಗಳಿಗೆ ಮುಖ್ಯ ಕಾರಣಗಳಾಗಿವೆ ಎಂದು ವಿವರಿಸಿದರು.

ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ನಿಯಮಿತ ಮತ್ತು ಸರಿಯಾದ ಸಮಯದಲ್ಲಿ ಆಹಾರ ಸೇವನೆ, ಊಟವಾದ ತಕ್ಷಣ ಮಲಗದಿರುವುದು ಇಂತಹ ಸರಳ ಕ್ರಮಗಳನ್ನು ಅನುಸರಿಸುವುದು ಉತ್ತಮ. ಈ ಕ್ರಮಗಳು ಜಠರ ಹುಣ್ಣುಗಳನ್ನು ತಡೆಗಟ್ಟಲು ಅನ್ನನಾಳಕ್ಕೆ ಆಮ್ಲ ಮರುಕಳಿಕೆಯನ್ನು ಕಡಿಮೆ ಮಾಡಲು ಮತ್ತು ಎದೆಯುರಿಯನ್ನು ನಿವಾರಿಸಲು ಸಹಕರಿಸುತ್ತವೆ ಎಂದರು.

ಸಾರ್ವಜನಿಕರು ಮತ್ತು ಆರೋಗ್ಯ ವೃತ್ತಿಪರರು ಯಕೃತ್ತಿನ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವ ತುರ್ತು ಅಗತ್ಯದತ್ತ ಗಮನಹರಿಸಬೇಕು. ಯಕೃತ್ತು ಗಮನಾರ್ಹ ಪುನರುತ್ಪಾದಕ ಸಾಮರ್ಥ್ಯ ಹೊಂದಿರುವ ಅಂಗವಾಗಿದ್ದು, ಯಕೃತ್ತಿನ ಸಮಸ್ಯೆಗಳನ್ನು ಪತ್ತೆಹಚ್ಚಲು ನಿಯಮಿತ ಮೇಲ್ವಿಚಾರಣೆಯ ಅಗತ್ಯವಿದೆ. ದೀರ್ಘಕಾಲದ ಯಕೃತ್ತಿನ ಕಾಯಿಲೆಯು ಸಿರೋಸಿಸ್‌, ರಕ್ತಸ್ರಾವ, ಹೆಪಾಟಿಕ್‌ ಎನ್ಸೆಫಲೋಪತಿ, ಜಾಂಡೀಸ್‌, ಅಸ್ಸೈಟ್ಸ್‌ ಹೆಪಟೋರಿನಲ್‌ ಸಿಂಡ್ರೋಮ್‌ ಮತ್ತು ಮತ್ತು ಅನ್ಯ ಯಕೃತ್ತಿನ ವೈಫಲ್ಯದಂತಹ ತೊಡಕುಗಳಿಗೆ ಕಾರಣವಾಗಬಹುದು ಎಂದು ವಿವರಿಸಿದರು.

ಮಣಿಪಾಲ್‌ ಆಸ್ಪತ್ರೆಯಲ್ಲಿ ನಾವು ಜಿಐ ರೋಗಗಳ ರೋಗ ನಿರ್ಣಯ ಮತ್ತು ಚಿಕಿತ್ಸೆಗಾಗಿ ಅತ್ಯಾಧುನಿಕ ನಿರ್ವಹಣಾ ತಂತ್ರಗಳನ್ನು ಬಳಸುತ್ತೇವೆ ಮತ್ತು ಸುಧಾರಿತ ಸೇವೆಗಳನ್ನು ನೀಡುವುದಾಗಿ ಹೇಳಿದರು.