ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪರಿಸರ ವೇದಿಕೆಯಿಂದ ಗುಡಿಬಂಡೆ ತಾಲೂಕು ಕೊಂಡಾವಲಹಳ್ಳಿ ಕ್ರಾಸ್ ನಲ್ಲಿ ಗಿಡನೆಟ್ಟು ಮಹಾಶಿವರಾತ್ರಿ ಹಬ್ಬ ಹಾಗೂ ವಿಶ್ವ ಮಹಿಳಾ ದಿನವನ್ನು ಶುಕ್ರವಾರ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಪರಿಸರವಾದಿ ಹಾಗೂ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನರಸಿಂಹಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಶಿವರಾತ್ರಿ ಹಬ್ಬವನ್ನು ದೇಶದಾದ್ಯಂತ ಆಚರಿಸುತ್ತಿದ್ದು, ಈ ದಿನ ಶಿವನು ಪಾರ್ವತಿಯನ್ನು ಮದುವೆಯಾದ ಸುದಿನ, ಆದ್ದರಿಂದ ಶಿವ ಪರಮಾತ್ಮನು ಎಲ್ಲರಿಗೂ ಸುಖ, ಸಂತೋಷವನ್ನು ನೀಡಲಿ ಎಂದರು.
ವಿಶ್ವ ಮಹಿಳಾ ದಿನಾಚರಣೆಯನ್ನು ವಿಶ್ವದಾದ್ಯಂತ ಎಲ್ಲರೂ ಆಚರಿಸುತ್ತಿದ್ದು, ಮಹಿಳೆ ಸಂಸಾರದ ಕಣ್ಣು, ಮಗಳಾಗಿ, ಸೊಸೆಯಾಗಿ, ಮಾತೆಯಾಗಿ, ಪತ್ನಿಯಾಗಿ ಈ ಸೃಷ್ಟಿಗೆ ಮೂಲ ಕಾರಣ ಅವಳೇ. ಆದ್ದರಿಂದ ಮಹಿಳೆಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿ ಹೇಳಿದರು.ಪರಿಸರ ವೇದಿಕೆ ಜಿಲ್ಲಾಧ್ಯಕ್ಷ ಡಾ. ಗುಂಪುಮರದ ಆನಂದ್ ಮಾತನಾಡಿ, ಗುಡಿಬಂಡೆ ತಾಲೂಕಿನ ಪ್ರತಿ ಹಳ್ಳಿಯಲ್ಲೂ, ಪ್ರತಿ ಹಬ್ಬಕ್ಕೂ ಗಿಡಗಳನ್ನು ನೆಡುವ ಕಾರ್ಯವನ್ನು ಪರಿಸರ ವೇದಿಕೆ ಮಾಡುತ್ತಿದೆ. ಇಂದು ಮಹಾಶಿವರಾತ್ರಿಯ ಹಬ್ಬದ ದಿನ ಪ್ರತಿಯೊಬ್ಬರೂ ಉಪವಾಸ ಮಾಡುತ್ತಾರೆ, ಅದೇ ರೀತಿ ಎಲ್ಲರೂ ಸಹ ಗಿಡಗಳನ್ನು ನೆಟ್ಟು ಶಿವ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ರೈತ ಶಿವಶಂಕರ್ ಅವರಿಗೆ ಗಿಡವನ್ನು ದತ್ತುಕೊಟ್ಟು ಘೋಷಣೆ ಮಾಡಲು ಸಲಹೆ ನೀಡಲಾಯಿತು.ಜಿಲ್ಲಾ ಪರಿಸರ ವೇದಿಕೆಯ ಸಂಚಾಲಕ ವಿ.ಶ್ರೀರಾಮಪ್ಪ , ಖಜಾಂಚಿ ಶ್ರೀನಾಥ್, ತಾಲೂಕು ಛಲವಾದಿ ಸಂಘದ ಅಧ್ಯಕ್ಷ ಎಂ.ಸಿ. ಚಿಕ್ಕನರಸಿಂಹಯ್ಯ, ತಾಪಂ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಸಮಾಜ ಸೇವಕ ಕೆ. ನಾಗರಾಜ್, ಪರಿಸರವಾದಿ ಮಧು, ಚಿಕ್ಕನಾರಾಯಣಪ್ಪ ಮತ್ತು ಮಕ್ಕಳು ಇದ್ದರು.