ಕಳಂಕಿತ ಅಧಿಕಾರಿಯಿಂದ ಗೃಹ ಸಚಿವ ಜಿ.ಪರಮೇಶ್ವರ್ ಗೆ ಉಡುಗೊರೆGift from tainted officer to Home Minister G. Parameshwara

| Published : Nov 06 2025, 01:30 AM IST

ಕಳಂಕಿತ ಅಧಿಕಾರಿಯಿಂದ ಗೃಹ ಸಚಿವ ಜಿ.ಪರಮೇಶ್ವರ್ ಗೆ ಉಡುಗೊರೆGift from tainted officer to Home Minister G. Parameshwara
Share this Article
  • FB
  • TW
  • Linkdin
  • Email

ಸಾರಾಂಶ

ಆದರೂ ಜಿಲ್ಲಾಧಿಕಾರಿಗಳು ೨೬ ಪುಟಗಳ ಅಡಕದೊಂದಿಗೆ ತಹಸೀಲ್ದಾರ್ ಕುಂಞ ಅಹಮದ್ ವಿರುದ್ಧ ಕರಡು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರೂ ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಭ್ರಷ್ಟ ಅಧಿಕಾರಿಯನ್ನು ಪೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ತುಮಕೂರು ಜಿಲ್ಲೆ ತುರುವೇಕರೆ ತಾಲೂಕು ತಹಸೀಲ್ದಾರ್ ಕುಂಞ ಅಹಮದ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮುಚ್ಚಿಹಾಕಲು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಎರಡು ಮುಚ್ಚಿದ ಬಾಕ್ಸ್‌ಗಳಲ್ಲಿ ನೀಡಿರುವ ಉಡುಗೊರೆಗಳ ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಒತ್ತಾಯಿಸಿದರು.

ಕುಂಞ ಅಹಮದ್ ಅವರು ಸರ್ಕಾರಿ ಸೇವೆಗೆ ಸೇರಿ ಎಂಟು ವರ್ಷಗಳಾಗಿದೆ. ಇವರ ವಿರುದ್ಧ ಹಣ ದುರುಪಯೋಗ, ಸರ್ಕಾರಿ ಜಮೀನು ಅಕ್ರಮ ಪರಭಾರೆ, ಅಕ್ರಮ ಖಾತೆ, ಕರ್ತವ್ಯಲೋಪ, ಅಧಿಕಾರ ದುರುಪಯೋಗ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಸರ್ಕಾರಕ್ಕೆ ಕೋಟ್ಯಂತರ ರು. ವಂಚಿಸಿರುವ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದರು.

ಈ ಪ್ರಕರಣಗಳ ವಿಚಾರಣೆಯಲ್ಲಿ ಕುಂಞ ಅಹಮದ್ ವಿರುದ್ಧ ಮಾಡಲಾದ ಆರೋಪಗಳು ತನಿಖೆಯಿಂದ ಸಾಬೀತಾಗಿದೆ. ಕೆಲವೊಂದು ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಸಮಯದಲ್ಲಿ ಕುಂಞ ಅಹಮದ್ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಎರಡು ಮುಚ್ಚಿದ ಬಾಕ್ಸ್‌ಗಳಲ್ಲಿ ಉಡುಗೊರೆಗಳನ್ನು ಸ್ವೀಕರಿಸುವ ಫೋಟೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಪರಮೇಶ್ವರ್ ಅವರಿಂದ ಅನುಕೂಲ ಪಡೆದುಕೊಳ್ಳಲು ಹಾಗೂ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮುಚ್ಚಿಹಾಕುವ ಉದ್ದೇಶದಿಂದ ಅಧಿಕಾರ ದುರುಪಯೋಗಪಡಿಸಿಕೊಂಡು ದೊಡ್ಡ ಪ್ರಮಾಣದ ಹಣ, ಚಿನ್ನ ಮತ್ತಿತರ ಬೆಲೆಬಾಳುವ ದುಬಾರಿ ವಸ್ತುಗಳನ್ನು ನೀಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ತಹಸೀಲ್ದಾರ್ ಆಗಿದ್ದ ಕುಂಞ ಅಹಮದ್ ಸೇರಿ ಎಂಟು ಅಧಿಕಾರಿ, ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಜಹಾರ ಖಾನಂ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರೂ ವಿಚಾರಣಾ ವರದಿ ಸಲ್ಲಿಸಿಲ್ಲ. ಏಕೆಂದರೆ ನೂರ್ ಜಹಾರ ಖಾನಂ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

ಕುಂಞ ಅಹಮದ್ ನಾಗಮಂಗಲ ತಹಸೀಲ್ದಾರ್ ಆಗಿದ್ದ ವೇಳೆ ನಾಗಮಂಗಲ ತಾಲೂಕು ಪ್ರಕೃತಿ ವಿಕೋಪ, ಕೋವಿಡ್-೧೯ಕ್ಕೆ ಸಂಬಂಧಿಸಿದಂತೆ ೩ ಕೋಟಿ ರು.ಗೂ ಹೆಚ್ಚು ಹಣ ದುರುಪಯೋಗದ ಆರೋಪ ವ್ಯಕ್ತವಾಗಿತ್ತು. ಕುಂಞ ಅಹಮದ್ ವಿರುದ್ಧ ಜಿಲ್ಲಾಧಿಕಾರಿ ತನಿಖಾ ತಂಡವನ್ನು ರಚಿಸಿ ತಂಡ ನೀಡಿದ ವರದಿಯಂತೆ ಕುಂಞ ಅಹಮದ್ ಸೇರಿ ನಾಲ್ವರು ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.

ಮಂಡ್ಯ ತಹಸೀಲ್ದಾರ್ ಆಗಿದ್ದ ಸಮಯದಲ್ಲಿ ಸತ್ತ ವ್ಯಕ್ತಿಯ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಆರೋಪದಡಿ ಮಂಡ್ಯ ಉಪವಿಭಾಗಾಧಿಕಾರಿಗಳು ಭೂ ದಾಖಲೆಗಳ ಉಪ ನಿರ್ದೇಶಕರು ಸಲ್ಲಿಸಿರುವ ಜಂಟಿ ತನಿಖಾ ವರದಿಯಲ್ಲಿ ಕುಂಞ ಅಹಮದ್ ಮಂಡ್ಯ ಹೃದಯಭಾಗದಲ್ಲಿರುವ ಕೋಟ್ಯಂತರ ರು. ಬೆಲೆಬಾಳುವ ಜಮೀನಿಗೆ ಸಂಬಂಧ ರಾಜಸ್ವ ನಿರೀಕ್ಷಕರ ವರದಿಯನ್ನು ನಿರ್ಲಕ್ಷಿಸಿ ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸದೆ ಮಾಡಿರುವ ಆದೇಶ ಕಾನೂನುಬಾಹೀರವಾಗಿದೆ ಎಂದು ತಿಳಿಸಿದ್ದರು. ಈ ವರದಿಯ ಮರುಪರಿಶೀಲನೆ ನಡೆಸುವಂತೆ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಂದ ಜಿಲ್ಲಾಧಿಕಾರಿ ಮೇಲೆ ರಾಜಕೀಯ ಒತ್ತಡ ತಂದಿದ್ದರು ಎಂದು ಆಪಾದಿಸಿದರು.

ಆದರೂ ಜಿಲ್ಲಾಧಿಕಾರಿಗಳು ೨೬ ಪುಟಗಳ ಅಡಕದೊಂದಿಗೆ ತಹಸೀಲ್ದಾರ್ ಕುಂಞ ಅಹಮದ್ ವಿರುದ್ಧ ಕರಡು ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರೂ ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಭ್ರಷ್ಟ ಅಧಿಕಾರಿಯನ್ನು ಪೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ನಾಗಮಂಗಲ ತಾಲೂಕಿನ ಮುಳುಕಟ್ಟಮ್ಮ ದೇವಸ್ಥಾನದಲ್ಲಿ ಸಂಪೂರ್ಣ ಕೆಟ್ಟಿದ್ದ ಬೆಲ್ಲ ಮತ್ತು ಅಕ್ಕಿಯನ್ನು ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರಕ್ಕೆ ದಾನವಾಗಿ ನೀಡಿರುವ ಹಾಗೂ ದೇಗುಲದ ಗಂಗಾ ಎಂಬ ಹೆಣ್ಣಾನೆ ಅನಾರೋಗ್ಯದಿಂದ ಮೃತಪಟ್ಟಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕುಂಞ ಅಹಮದ್ ಮತ್ತಿತರರ ವಿರುದ್ಧ ದಾಖಲೆ ಸಹಿತ ಸರ್ಕಾರಕ್ಕೆ ದೂರು ನೀಡಿದ್ದು, ಇದರ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸೂಚಿಸಲಾಗಿದೆ. ಇದಲ್ಲದೆ ಮುಳುಕಟ್ಟಮ್ಮ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಸಂಗ್ರಹವಾಗಿದ್ದ ಅಕ್ಕಿ, ಬೆಲ್ಲ, ಸೀರೆ, ಬೆಳ್ಳಿ, ಬಂಗಾರದ ಆಭರಣಗಳು ಹಾಗೂ ದೊಡ್ಡ ಮಟ್ಟದ ಹಣ ದುರುಪಯೋಗ, ಅತಿವೃಷ್ಟಿಗೆ ಬಿಡುಗಡೆಯಾದ ಹಣದಲ್ಲಿ ಭಾರೀ ಅಕ್ರಮ ನಡೆದಿರುವ ಬಗ್ಗೆಯೂ ತನಿಖೆ ನಡೆಯುತ್ತಿರುವುದಾಗಿ ಹೇಳಿದರು.

ಮಂಡ್ಯ ಜಿಲ್ಲೆಯ ನಾಗಮಂಗಲ, ಮಂಡ್ಯ, ಮೈಸೂರು ಜಿಲ್ಲೆ ಪಿರಿಯಾಪಟ್ಟಣ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಕುಂಞ ಅಹಮದ್ ತಹಸೀಲ್ದಾರ್ ಆಗಿ ಕರ್ತವ್ಯನಿರ್ವಹಿಸಿದ್ದು ಇವರ ದುರ್ನಡತೆ ವಿರುದ್ಧ ಇವರು ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಎಲ್ಲಾ ಕಡೆಗಳಲ್ಲೂ ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅವೆಲ್ಲವನ್ನೂ ಮುಚ್ಚಿಹಾಕುವ ಸಲುವಾಗಿ ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಉಡುಗೊರೆ ನೀಡಿರುವ ಬಗ್ಗೆ ದೂರು ದಾಖಲಿಸಿದ್ದು ಕಾನೂನು ಕ್ರಮಕ್ಕೆ ಒತ್ತಾಯಿಸಿರುವುದಾಗಿ ಹೇಳಿದರು.

ಗೋಷ್ಠಿಯಲ್ಲಿ ಶಿವರಾಮೇಗೌಡ, ಅಣ್ಣಯ್ಯ, ಮಧು, ಜಯರಾಂ, ಕಿರಣ್‌ಕುಮಾರ್, ಸೋಮಣ್ಣ ಇತರರಿದ್ದರು.