ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಗಿರಿಜಾ ಪ್ರಕಾಶ್ ವರ್ಮ ಕರೆ

| Published : Jan 18 2025, 12:47 AM IST

ಸಾರಾಂಶ

ತರೀಕೆರೆ, ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಹೇಳಿದ್ದಾರೆ.ನ್ಯಾಷನಲ್ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ನಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ 50ನೇ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅದರ ಬೆಳವಣಿಗೆಗೆ ಶ್ರಮಿಸುವುದು ಪೋಷಕರ ಮತ್ತು ಶಿಕ್ಷಕರ ಬಹುದೊಡ್ಡ ಜವಾಬ್ದಾರಿ ಎಂದರು.

ನ್ಯಾಷನಲ್ ಸ್ಕೂಲ್ ನಿಂದ ಬಯಲು ರಂಗಮಂದಿರದಲ್ಲಿ ನಡೆದ 50ನೇ ಶಾಲಾ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದು ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ ಹೇಳಿದ್ದಾರೆ.ನ್ಯಾಷನಲ್ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ನಿಂದ ಪಟ್ಟಣದ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ 50ನೇ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅದರ ಬೆಳವಣಿಗೆಗೆ ಶ್ರಮಿಸುವುದು ಪೋಷಕರ ಮತ್ತು ಶಿಕ್ಷಕರ ಬಹುದೊಡ್ಡ ಜವಾಬ್ದಾರಿ ಎಂದರು.

ಪಟ್ಟಣದ ಮಧ್ಯ ಭಾಗದಲ್ಲಿರುವ ಈ ಶಾಲೆ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯುತ್ತಿದ್ದು 50ನೇ ವರ್ಷಕ್ಕೆ ಕಾಲಿಟ್ಟಿರುವುದು ತುಂಬಾ ಸಂತೋಷದಾಯಕ ಸಂಗತಿ. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ಮನರಂಜನಾದಾಯಕವಾಗಿದ್ದು, ಪ್ರತಿಭಾ ಕಾರಂಜಿ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಅವರ ಆತ್ಮಸ್ಥೈರ್ಯ ಬೆಳೆಯುತ್ತದೆ. ಮಕ್ಕಳಲ್ಲಿರುವ ವಾಸ್ತವ ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರಿಂದ ಸಾಧ್ಯ ಅದಕ್ಕೆ ಪೋಷಕರು ಸಹಕಾರ ನೀಡಿದರೆ ಮಕ್ಕಳ ಜೀವನ ಉಜ್ವಲವಾಗುತ್ತದೆ ಎಂದು ಹೇಳಿದರು.ತರೀಕೆರೆ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷ ಟಿ.ವಿ.ರೇವಣ್ಣ ಮಾತನಾಡಿ ರಜತ ಮಹೋತ್ಸವಕ್ಕೆ ನಾವು ಈ ಶಾಲಾ ವಾರ್ಷಿಕೋತ್ಸವ ಮುಖಾಂತರ ಪಾದರ್ಪಣೆ ಮಾಡುತ್ತಿದ್ದೇವೆ. ಈ ಶಾಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬಹಳ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಇದರಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ತರೀಕೆರೆ ಪ್ರಥಮ ಶಾಸಕ ಟಿ. ನಾಗಪ್ಪನವರ ಸಹಕಾರದಿಂದ ಆರಂಭವಾದ ಈ ಶಾಲೆ ಈಗ ಅವರ ಮೊಮ್ಮಗನ ಕಾಲದಲ್ಲಿ ಮುಂದುವರಿಯುತ್ತಿರುವುದು ತುಂಬಾ ಸಂತೋಷ. ಈ ಶಾಲೆಗೆ ಹಲವು ಮಹನೀಯರ ಕೊಡುಗೆ ಇದೆ ಎಂದರು. ಕಾರ್ಯದರ್ಶಿ ಜಿ.ಹೇಮಲತ ರೇವಣ್ಣ ಶಾಲಾ ವರದಿ ವಾಚಿಸಿ, ಶಾಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಪ್ರತಿಭಾ ಕಾರಂಜಿ ಮತ್ತು ಕ್ರೀಡೆಯಲ್ಲಿ ಗೆದ್ದ ಮಕ್ಕಳಿಗೆ ಕಳೆದ ವರ್ಷ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.ಶಿಕ್ಷಣ ಸಂಯೋಜಕರಾದ ಶಿಲ್ಪ ಮಾತನಾಡಿ, ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ನಾವು ಪೋಷಕರಾಗಿ ಗಮನಿಸುವುದಾದರೆ ಮಕ್ಕಳಲ್ಲಿ ಕನಸನ್ನು ಬಿತ್ತುವ ಕೆಲಸ ಮಾಡಬೇಕು ಎಂದು ಹೇಳಿದರು. ತರೀಕೆರೆ ಎಜುಕೇಶನ್ ಸೊಸೈಟಿ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ತುಂಬಾ ಅಗತ್ಯ. ಮಕ್ಕಳು ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೆಳೆದರೆ ಮಾತ್ರ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಮಧ್ಯಮ ವರ್ಗದ ಮಕ್ಕಳಿರುವ ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವುದು. ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವುದು ಮಕ್ಕಳ ಬೆಳವಣಿಗೆಗೆ ಪೂರಕ ಎಂದು ಹೇಳಿದರು.ಎಂಜಿನಿಯರ್ ಹರೀಶ್, ನಿವೃತ್ತ ಶಿಕ್ಷಕಿ ವನಮಾಲಾ, ನಳಿನಾ ಪಾಂಡುರಂಗಪ್ಪ, ಟಿ. ದಾದಾಪೀರ್ ಮಾತನಾಡಿದರು. ತ.ಮ. ದೇವಾನಂದ್, ಮುಖ್ಯ ಶಿಕ್ಷಕಿ ಜಿ.ಎಂ. ಲೀಲಾವತಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

17ಕೆಟಿಆರ್.ಕೆ.10ಃ

ತರೀಕೆರೆ ನ್ಯಾಷನಲ್ ಇಂಗ್ಲಿಷ್ ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿ ನಡೆದ 50ನೇ ವಾರ್ಷಿಕೋತ್ಸವದಲ್ಲಿ ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ತರೀಕೆರೆ ಎಜುಕೇಶನ್ ಸೊಸೈಟಿ ಅಧ್ಯಕ್ಷ ಟಿ.ಎಂ.ವೆಂಕಟೇಶ್, ಉಪಾಧ್ಯಕ್ಷ ಟಿ.ವಿ.ರೇವಣ್ಣ, ಕಾರ್ಯದರ್ಶಿ ಜಿ.ಹೇಮಲತ ರೇವಣ್ಣ, ತ.ಮ.ದೇವಾನಂದ್ ಮತ್ತಿತರರು ಭಾಗವಹಿಸಿದ್ದರು.