ಸಾರಾಂಶ
ಯಾದಗಿರಿ: ಜಿಲ್ಲೆಯ ಶಹಾಪುರದ ವಸತಿ ಶಾಲೆಯೊಂದರಲ್ಲಿ 9ನೇ ತರಗತಿ ವಿದ್ಯಾರ್ಥಿನಿಗೆ ಶಾಲೆಯ ಶೌಚಾಲಯದಲ್ಲೇ ಹೆರಿಗೆಯಾದ ಘಟನೆಯು ಮನುಷ್ಯತ್ವಕ್ಕೆ ವಿರುದ್ಧವಾದುದ್ದು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಅನಪುರ ಅವರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಂದು ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಪ್ರಮಾಣ ಕಡಿಮೆ ಆಗಿದೆ. ಪೋಷಕರು ಹಳ್ಳಿಯಿಂದ ತಮ್ಮ ಮಕ್ಕಳು ವಸತಿ ನಿಲಯದಲ್ಲಿ ಸುರಕ್ಷಿತವಾಗಿರುತ್ತಾರೆ ಎಂದು ಮಕ್ಕಳ ಉನ್ನತ ಭವಿಷ್ಯಕ್ಕೆ ವಿದ್ಯಾಭ್ಯಾಸಕ್ಕೆಂದು ವಸತಿ ನಿಲಯಕ್ಕೆ ತಂದು ಬಿಡುತ್ತಾರೆ. ಈ ಘಟನೆಯು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ವಸತಿ ಶಾಲೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು. ವಿದ್ಯಾರ್ಥಿನಿಯ ದೈಹಿಕ ಸ್ಥಿತಿ ಬದಲಾವಣೆಯಾದ ಸಂದರ್ಭದಲ್ಲಿ ವಸತಿ ನಿಲಯದ ಸಿಬ್ಬಂದಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕಿತ್ತು. ವಸತಿ ನಿಲಯದ ಸಿಬ್ಬಂದಿ ಎಲ್ಲ ಮಕ್ಕಳ ವೈದ್ಯಕೀಯ ಪರೀಕ್ಷೆ ತಿಂಗಳಿಗೊಮ್ಮೆ ಪರಿಶೀಲಿಸಬೇಕಿತ್ತು. ಆದರೆ, ಸಿಬ್ಬಂದಿಗಳು ಆರೋಗ್ಯ ಪರೀಕ್ಷೆ ಮಾಡದೆ ಎಡವಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮುಂದೆ ಈ ರೀತಿಯ ಘಟನೆ ಸಂಭವಿಸಿದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಬೇಕೆಂದು ತಿಳಿಸಿದರು.