ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ ವೈದ್ಯಕೀಯ, ಇಂಜಿನಿಯರಿಂಗ್, ಆಡಳಿತ, ವಿಜ್ಞಾನ, ಕೃಷಿ, ಕ್ರೀಡೆ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಸಾಮರ್ಥ್ಯ

ಕುಷ್ಟಗಿ: ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಹೆಣ್ಣು ಮಗು ಕೇವಲ ಕುಟುಂಬದ ಸದಸ್ಯೆಯಾಗಿ ನೋಡದೆ ಸಮಾಜದ ಅಮೂಲ್ಯ ಸಂಪತ್ತಾಗಿ ಪರಿಗಣಿಸಬೇಕು ಎಂದು ಸಿಡಿಪಿಒ ಇಲಾಖೆ ಸೂಪರವೈಸರ್ ಅನ್ನಪೂರ್ಣ ಪಾಟೀಲ ಹೇಳಿದರು.

ತಾಲೂಕಿನ ಹುಲಿಯಾಪೂರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬೇಟಿ ಬಚಾವೋ–ಬೇಟಿ ಪಢಾವೋ ಅಭಿಯಾನ ಅಂಗವಾಗಿ ಬೇಟಿ ಬಚಾವೋ–ಬೇಟಿ ಪಢಾವೋ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸುವ ಮನೋಭಾವ ಬದಲಾಗದಿದ್ದರೆ ಸಮ ಸಮಾಜದ ಕನಸು ನನಸಾಗುವುದಿಲ್ಲ, ಆದ್ದರಿಂದ ಪ್ರತಿಯೊಂದು ಕುಟುಂಬವೂ ಹೆಣ್ಣು ಮಗುವಿನ ಭದ್ರತೆ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ ವೈದ್ಯಕೀಯ, ಇಂಜಿನಿಯರಿಂಗ್, ಆಡಳಿತ, ವಿಜ್ಞಾನ, ಕೃಷಿ, ಕ್ರೀಡೆ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.ಅವರಿಗೆ ಅವಕಾಶ ಕಲ್ಪಿಸುವುದು ಸಮಾಜದ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ, ಬಾಲ್ಯ ವಿವಾಹ ಮತ್ತು ಶಾಲಾ ಶಿಕ್ಷಣದಿಂದ ಬಾಲಕಿಯರು ದೂರ ಉಳಿಯುವಂತಹ ಸಮಸ್ಯೆ ತೊಡೆದು ಹಾಕಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವುದು ಪ್ರತಿಯೊಬ್ಬ ಪೋಷಕರ, ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣ್ಯರಾದ ಹನುಮಗೌಡ ಪಾಟೀಲ್, ಮುರ್ತುಜಸಾಬ್‌ ಬನ್ನಿಗೋಳ ನೇತ್ರಾ, ಪ್ರಭು, ಮೌಲಾಬಿ, ಯಮನೂರಸಾಬ್‌, ರೇಷ್ಮಾ, ಹೊನ್ನೂರಸಾಬ್, ರಮಜಾನಭಿ ಶರೀಪಸಾಬ್, ಶಾಹಿರಾಬಾನು, ದೇವಮ್ಮ ಕಟ್ಟಿಗೇರ, ಪಿರಸಾಬ್, ಅಂಗನವಾಡಿ ಕಾರ್ಯಕರ್ತೆ ರಜಿಯಾ ಬೇಗಂ, ಶಿವಲಿಂಗಮ್ಮ, ಹುಸೇನಬಿ ಸೇರಿದಂತೆ ಪೋಷಕರು, ಮಕ್ಕಳು ಇದ್ದರು.

3ನೇ ಅಂಗನವಾಡಿಯಲ್ಲೇ ಎಲ್ಕೆಜಿ–ಯುಕೆಜಿ ಆರಂಭ: ಮಕ್ಕಳಿಗೆ ಬಾಲ್ಯದಲ್ಲಿಯೇ ಗುಣಮಟ್ಟದ ಶಿಕ್ಷಣ ದೊರಕಿಸುವ ಉದ್ದೇಶದಿಂದ ಕುಷ್ಟಗಿ ತಾಲೂಕಿನ ಹುಲಿಯಾಪೂರ ಗ್ರಾಮದ 3ನೇ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ಸೂಪರವೈಸರ್ ಅನ್ನಪೂರ್ಣ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಆರಂಭಗೊಂಡಿರುವ ಈ ಶೈಕ್ಷಣಿಕ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶದ ಮಕ್ಕಳು ಖಾಸಗಿ ಶಾಲೆಗಳ ಮಾದರಿಯಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುವ ಅವಕಾಶ ದೊರೆಯಲಿದೆ. ಆಟ, ಹಾಡು, ಕಥೆ, ಚಿತ್ರಕಲೆ ಹಾಗೂ ಚಟುವಟಿಕೆ ಆಧಾರಿತ ಕಲಿಕೆಯ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಬೆಳೆಸುವ ಗುರಿ ಹೊಂದಲಾಗಿದೆ.

ಬಾಲ್ಯದ ಮೊದಲ ಐದು ವರ್ಷಗಳು ಮಗುವಿನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಹಂತವಾಗಿವೆ. ಈ ಅವಧಿಯಲ್ಲಿ ಉತ್ತಮ ಕಲಿಕಾ ವಾತಾವರಣ ದೊರೆತರೆ ಮುಂದಿನ ಶಿಕ್ಷಣದ ಭದ್ರ ಬುನಾದಿ ನಿರ್ಮಾಣವಾಗುತ್ತದೆ. ಇದೇ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲಾಗಿದೆ ಎಂದು ತಿಳಿಸಿದ ಅವರು, ಹೊಸ ವ್ಯವಸ್ಥೆಯಡಿ ಮಕ್ಕಳಿಗೆ ವಯೋಮಾನಕ್ಕೆ ತಕ್ಕ ಕಲಿಕಾ ಸಾಮಗ್ರಿ, ಆಟಿಕೆ, ಕಥೆ ಪುಸ್ತಕಗಳು ಹಾಗೂ ಚಟುವಟಿಕೆ ಆಧಾರಿತ ಬೋಧನಾ ವಿಧಾನ ಅಳವಡಿಸಲಾಗಿದೆ. ಮಕ್ಕಳಲ್ಲಿ ಭಾಷಾ ಕೌಶಲ್ಯ,ಸಂಖ್ಯಾಜ್ಞಾನ, ಸೃಜನಶೀಲತೆ, ಸಾಮಾಜಿಕ ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.