ಮೈಸೂರಿನಲ್ಲಿ ಬಾಲಕಿ ರೇಪ್‌, ಮರ್ಡರ್‌ ಪ್ರಕರಣ: ಕಣ್ಣೀರಲ್ಲಿ ಕುಟುಂಬ

| Published : Oct 16 2025, 02:00 AM IST

ಮೈಸೂರಿನಲ್ಲಿ ಬಾಲಕಿ ರೇಪ್‌, ಮರ್ಡರ್‌ ಪ್ರಕರಣ: ಕಣ್ಣೀರಲ್ಲಿ ಕುಟುಂಬ
Share this Article
  • FB
  • TW
  • Linkdin
  • Email

ಸಾರಾಂಶ

Girl raped and murdered in Mysore: Family in tears

-ಬಲೂನ್‌ ಮಾರಿ ಹೊಟ್ಟೆ ಹೊರೆಯಲು ಮೈಸೂರಿಗೆ ಹೋಗಿದ್ದ ಬಾಲಕಿ । ಕಾಮುಕನಿಂದ ಅತ್ಯಾಚಾರ, ಕೊಲೆ । ಸಾಂತ್ವನ ಹೇಳಲು ಬರದ ಜನಪ್ರತಿನಿಧಿ

-------

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಹೋಗಿದ್ದ ಕಲಬುರಗಿಯ ಅಲೆಮಾರಿ ಸಮುದಾಯದ ಬಾಲಕಿಯನ್ನ ಕಾಮುಕ ಬಲಾತ್ಕರಿಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆ ಕುಟುಂಬವನ್ನ ತೀವ್ರವಾಗಿ ಘಾಸಿಗೊಳಿಸಿದೆ.

ನಗರದ ಸೂಪರ್‌ ಮಾರ್ಕೆಟ್‌ನ ಹಳೆ ಜೈಲ್‌ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸವಿರುವ ಬಲೂನ್‌ ಬಾಲಕಿಯ ಕುಟುಂಬದ ಗೋಳು ಹೇಳತೀರದು. ದಸರಾದಲ್ಲಿ ಬಲೂನ್‌ ಮಾರಿ ಹೊಟ್ಟೆ ತುಂಬಿಸಿಕೊಳ್ಳಲು ಹೋಗಿದ್ದ ವೇಳೆ ಮನೆ ಮಗಳು ಕಾಮುಕನ ಅಟ್ಟಹಾಸಕ್ಕೆ ಬಲಿಯಾದ ಪ್ರಸಂಗ ಈ ಕುಟುಂಬವನ್ನೇ ಕಂಗಾಲು ಮಾಡಿದೆ.

ಬಲೂನ್ ಮಾರುತ್ತ ದಸರಾ ಕಣ್ತುಂಬಿಕೊಳ್ಳಲು ಪೋಷಕರೊಂದಿಗೆ ಹೋಗಿದ್ದ ಮಗಳಿಗೆ ದುರ್ಗತಿ ಒದಗಿದೆ. ನಮಗಾದ ನೋವು, ಯಾತನೆಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಬಾಲಕಿಯ ಪೋಷಕರು, ಅಜ್ಜಿ ಗೋಳಾಡುತ್ತಿದ್ದಾರೆ.

ಈ ಕುಟುಂಬ ವಾಸವಾಗಿರುವ ಸೂಪರ್‌ ಮಾರ್ಕೆಟ್ ಹಳೆ ಜೈಲ್‌ ಪ್ರದೇಶಕ್ಕೆ ಕನ್ನಡಪ್ರಭ ಭೇಟಿ ನೀಡಿದಾಗ, ಬಲೂನ್‌ ಬಾಲಕಿಯನ್ನು ನೆನೆದು ಕಣ್ಣೀರಾದರು. ಅಮಾಯಕಿಯ ಮೇಲೆ ಕಾಮುಕ ತೋರಿದ್ದ ದರ್ಪಕ್ಕೆ ಹಿಡಿಶಾಪ ಹಾಕಿದರು.

ದಸರಾ ಜಾತ್ರೆಯಲ್ಲಿ ತಮಗಾದ ನೋವಿಗೆ ಪೊಲೀಸರು, ಆಡಳಿತದವರು ತಕ್ಷಣಕ್ಕೆ ಸ್ಪಂದಿಸಲಿಲ್ಲವೆಂದು ಆಕ್ರೋಶ ಹೊರಹಾಕಿದರು.

....ಬಾಕ್ಸ್‌.....

ನೊಂದ ಕುಟುಂಬಕ್ಕೆ ಸಂತೈಸುವವರಿಲ್ಲ!

ದಸರಾ ವೇಳೆ ಇಂತಹ ಹೀನ ಕೃತ್ಯ ನಡೆದರೂ ದಸರಾ ಆಯೋಜಿಸುವ ಮೈಸೂರು ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ, ನೊಂದ ಕುಟುಂಬ ನಮ್ಮ ಕಡೆಯವರೆಂದು ಸ್ಪಂದಿಸಬೇಕಿದ್ದ ಜಿಲ್ಲಾಡಳಿತವೂ ಸೇರಿದಂತೆ ಯಾವ ಹಂತದಿಂದಲೂ ಕುಟುಂಬದ ಕಣ್ಣೀರು ಒರೆಸುವ ಕೆಲಸ ಇಂದಿಗೂ ನಡೆದಿಲ್ಲ.

ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಕಾಮುಕನನ್ನು ಗುಂಡು ಹೊಡೆದು ಬಂಧಿಸಿದ್ದಾರೆ,

ನಾವು ಅಲೆಮಾರಿಗಳು, ನಮಗ್ಯಾರ ಬೆಂಬಲ ಇಲ್ಲ, ಹೊಟ್ಟೆಪಾಡಿಗೆ ಊರೂರು ಅಲೆಯೋರು. ನಮ್ಮದೇ ಸಮುದಾಯ, ಸಂಘಟನೆಗಳ ಬೆಂಬಲ ನಮಗೆಲ್ಲಿಂದ ಬರಬೇಕು ಹೇಳಿ? ಬೇರೆ ಯಾರಿಗಾದರೂ ಹೀಗಾಗಿದ್ದರೆ ದೊಡ್ಡ ಹೋರಾಟ, ಎಲ್ರೂ ಸ್ಪಂದಿಸುತ್ತಿದ್ರು, ನಮ್ಮ ಈ ದುಃಖ, ನೋವು, ಯಾತನೆ ನಾವೇ ನುಂಗಬೇಕು, ನಾವೇ ಅನುಭವಿಸಬೇಕು, ನಮ್ಮಂತಹ ಬಡವರ ಗೋಳಿಗೆ ಕೇಳೋರೇ ಇರೋದಿಲ್ಲವೆಂದು ರೋದಿಸುತ್ತಿದ್ದಾರೆ.

.....ಬಾಕ್ಸ್‌.....

ರಾತ್ರಿಯಿದ್ದ ಮಗಳು ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ!

ಅಲೆಮಾರಿ ಸಮುದಾಯಕ್ಕೆ ಸೇರಿದ 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕ ಡೇರೆ ಹಾಕಿ ತಂಗಿದ್ದವು. ಈ ಪೈಕಿ ಒಂದು ಕುಟುಂಬದ ಬಾಲಕಿ ಕಾಣೆಯಾಗಿದ್ದಾಳೆ. ರಾತ್ರಿ 12ರವರೆಗೆ ವ್ಯಾಪಾರ ಮಾಡಿಕೊಂಡು ಬಂದಿದ್ದ ಕುಟುಂಬ, ಒಟ್ಟಿಗೆ ಎಂಟು ಜನ ಮಲಗಿದ್ದರು. ಮುಂಜಾನೆ 4ರ ವೇಳೆ ಬಂದಿದೆ. ಆಗ ಎಚ್ಚರಗೊಂಡಾಗ ಬಾಲಕಿಯು ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ಕೂಡಲೇ ಕುಟುಂಬಸ್ಥರು ಮಳೆಯಲ್ಲೇ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ನಂತರ ಬಾಲಕಿ ಡೇರೆಯಿಂದ 50 ಮೀಟರ್ ದೂರದಲ್ಲಿ ನಿರ್ಜೀವವಾಗಿ ಬಿದ್ದಿರುವುದು ಕಂಡಿದ್ದಾರೆ. ಆಕೆಯ ದೇಹವು ಭಾಗಶಃ ಮಣ್ಣಿನ ರಾಶಿಯಲ್ಲಿ ಹೂತುಹೋಗಿತ್ತು. ಮಣ್ಣಿನಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದವು, ಅಪ್ರಾಪ್ತೆ ಮೈ ಮೇಲೆ ಬಟ್ಟೆ ಇರದ ಕಾರಣ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಅನುಮಾನ ಬಂತು ಎಂದು ಬಾಲಕಿಯ ಸಹೋದರ ಸಂಬಂಧಿ ವಿವರಿಸಿದರು.

ಫೋಟೋ- ಕಲಬುರಗಿ ಸೂಪರ್‌ 1 ಮತ್ತು ಕಲಬುರಗಿ ಸೂಪರ್‌ 2

ಕಲಬುರಗಿಯ ಸೂಪರ್‌ ಮಾರ್ಕೆಟ್‌ ಪ್ರದೇಶದ ಹಳೆ ಜೈಲ್‌ ಬಳಿಯೇ ಮೈಸೂರು ದಸರಾದಲ್ಲಿ ಕಾಮುಕನಿಗೆ ಬಲಿಯಾದ ಬಲೂನ್‌ ಬಾಲಕಿ ಮನೆ ಇರೋದು.