ಬಾಲಕಿ ಹತ್ಯೆ ಪ್ರಕರಣ: ಸಿಐಡಿ ತಂಡದಿಂದ ತನಿಖೆ ಶುರು

| Published : Apr 16 2025, 12:37 AM IST

ಸಾರಾಂಶ

ಐದು ವರ್ಷದ ಆದ್ಯಾ ಕುರಿ ಎಂಬ ಬಾಲಕಿ ಮೇಲೆ ಬಿಹಾರದ ಪಾಟ್ನಾ ನಿವಾಸಿ ರಿತೇಶಕುಮಾರ ಎಂಬಾತ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಿದ್ದನು. ಬಾಲಕಿಯ ಸಾವು ಆಗುತ್ತಿದ್ದಂತೆ ಇಡೀ ನಗರವೇ ಹೊತ್ತಿ ಉರಿದಿತ್ತು.

ಹುಬ್ಬಳ್ಳಿ:

ಹತ್ಯೆಗೀಡಾದ ಬಾಲಕಿ ಮತ್ತು ಆರೋಪಿಯ ಪೊಲೀಸ್‌ ಎನ್‌ಕೌಂಟರ್‌ ಪ್ರಕರಣಕ್ಕೆ ಇದೀಗ ಸಿಐಡಿ ಎಂಟ್ರಿ ಕೊಟ್ಟಿದೆ. ಮಹಾನಗರ ಪೊಲೀರಿಂದ ಇಡೀ ಪ್ರಕರಣ ಸಿಐಡಿಗೆ ಹಸ್ತಾಂತರವಾಗಿದ್ದು, ಮಂಗಳವಾರ ಬೆಳಗ್ಗೆಯೇ ನಗರಕ್ಕೆ ಬಂದಿಳಿದಿರುವ ಸಿಐಡಿ ತಂಡ ತನಿಖೆ ಶುರುಮಾಡಿದೆ.

ಐದು ವರ್ಷದ ಆದ್ಯಾ ಕುರಿ ಎಂಬ ಬಾಲಕಿ ಮೇಲೆ ಬಿಹಾರದ ಪಾಟ್ನಾ ನಿವಾಸಿ ರಿತೇಶಕುಮಾರ ಎಂಬಾತ ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆ ಮಾಡಿದ್ದನು. ಬಾಲಕಿಯ ಸಾವು ಆಗುತ್ತಿದ್ದಂತೆ ಇಡೀ ನಗರವೇ ಹೊತ್ತಿ ಉರಿದಿತ್ತು. ಎಲ್ಲೆಡೆ ಪ್ರತಿಭಟನೆ ತೀವ್ರವಾಗಿತ್ತು. ಪೊಲೀಸ್‌ ಕಮಿಷನರೇಟ್‌ ಆರೋಪಿ ಬಂಧನಕ್ಕೆ 5 ತಂಡ ರಚಿಸಿತ್ತು. ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಸ್ಥಳ ಮಹಜರಿಗೆ ಕರೆದುಕೊಂಡು ಹೋಗುವಾಗ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ಆತ್ಮರಕ್ಷಣೆಗಾಗಿ ಲೇಡಿ ಪಿಎಸ್‌ಐ ಹಾರಿಸಿದ ಗುಂಡಿಗೆ ಆರೋಪಿ ಬಲಿಯಾಗಿದ್ದ. ಇದರಲ್ಲಿ ಗಾಯಗೊಂಡು ಮೂವರು ಪೊಲೀಸ್‌ ಸಿಬ್ಬಂದಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಐಡಿ ತನಿಖೆ ಏಕೆ?: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಅಥವಾ ವ್ಯಕ್ತಿ ಸಾವಿಗೀಡಾದರೆ ಆ ಪ್ರಕರಣದ ತನಿಖೆಯನ್ನು ಸಿಐಡಿಯೇ ನಡೆಬೇಕು ಎನ್ನುವುದು ಸುಪ್ರೀಂ ಕೋರ್ಟ್‌ನ ಗೈಡ್ಲೈನ್‌. ಈ ಪ್ರಕರಣದಲ್ಲಿ ಪೊಲೀಸ್‌ ಎನ್‌ಕೌಂಟರ್‌ ಆಗಿದೆ. ಪೊಲೀಸ್‌ ಮೂಲಗಳ ಪ್ರಕಾರ ಆತ್ಮರಕ್ಷಣೆ ಹಾರಿಸಿದ ಗುಂಡಿಗೆ ಆರೋಪಿ ಬಲಿಯಾಗಿದ್ದಾನೆ ಎಂಬುದಾಗಿದೆ. ಏನೇ ಆಗಲಿ ಪಾರದರ್ಶಕ ಇರಲಿರೆನ್ನುವ ಕಾರಣಕ್ಕೆ ಸಿಐಡಿ ತನಿಖೆಯನ್ನು ತಾನಾಗಿಯೇ ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ತಂಡ ನಗರಕ್ಕೆ ಆಗಮಿಸಿ ತನಿಖೆ ಶುರುಮಾಡಿದೆ.

ಎಸ್ಪಿ ವೆಂಕಟೇಶಕುಮಾರ, ಡಿವೈಎಸ್‌ಪಿ ಪುನೀತ್‌ಕುಮಾರ, ಇನಸ್ಪೆಕ್ಟರ್ ಮಂಜುನಾಥ ಸೇರಿದಂತೆ ಐದಾರು ಅಧಿಕಾರಿಗಳನ್ನೊಳಗೊಂಡ ತಂಡವು ನಗರಕ್ಕೆ ಆಗಮಿಸಿ, ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದೆ. ಕಮಿಷನರ್‌ ಎನ್‌. ಶಶಿಕುಮಾರ್, ಡಿಸಿಪಿಗಳಾದ ರವೀಶ, ಮಾಹಾನಿಂಗ ನಂದಗಾವಿ ಅವರಿಂದ ಪ್ರಕರಣದ ಮಾಹಿತಿ ಪಡೆದು, ಕೆಎಂಸಿಆರ್‌ಐಗೆ ತೆರಳಿ ಅಲ್ಲಿ ಶವಾಗಾರದಲ್ಲಿ ಆರೋಪಿ ಶವ ವೀಕ್ಷಿಸಿತು. ಬಳಿಕ ಆರೋಪಿ ಹಲ್ಲೆಯಿಂದ ಗಾಯಗೊಂಡಿರುವ ಪೊಲೀಸ್‌ ಸಿಬ್ಬಂದಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯಿತು.

ಅಲ್ಲಿಂದ ಮೃತ ಬಾಲಕಿ ಮನೆಗೆ ತೆರಳಿ ತಂದೆ- ತಾಯಿಯನ್ನು ಮಾತನಾಡಿಸಿತು. ಅಲ್ಲಿಂದ ಘಟನೆ ನಡೆದ ಸ್ಥಳ, ಎನ್‌ಕೌಂಟರ್‌ ಮಾಡಿದ ಸ್ಥಳ ಸೇರಿದಂತೆ ಮತ್ತಿತರರ ಪ್ರದೇಶಗಳಿಗೆ ತೆರಳಿ ಮಾಹಿತಿ ಕಲೆ ಹಾಕಿತು.