ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಕೆಸರುಗದ್ದೆಯಂತಾಗಿದ್ದು ಇಂತಹ ದುಸ್ಥಿತಿಯಲ್ಲೆ ಸಾವಿರಾರು ವಿದ್ಯಾರ್ಥಿನಿಯರು, ಶಿಕ್ಷಕರು, ಉಪನ್ಯಾಸಕ ವೃಂದವು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.ನಗರದ ಬೆಂಗಳೂರು ವೃತ್ತದಲ್ಲಿರುವ ಈ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು ಸರಿ ಸುಮಾರು ೧೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಹಾಗೂ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಜನೆಗಾಗಿ ಬರುತ್ತಾರೆ. ಇವರಲ್ಲಿ ಬಹುತೇಕರು ಗ್ರಾಮೀಣ ಬಡ ಮಕ್ಕಳು. ಈ ಕಾಲೇಜಿನ ಆವರಣ ಸ್ವಚ್ಛಗೊಳಿಸದ ಕಾರಣ ಸೊಳ್ಳೆ, ಕ್ರಿಮಿಕೀಟಗಳ ತಾಣವಾಗಿ ವಿದ್ಯಾರ್ಥಿನಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಆವಣದಲ್ಲಿ ಮಳೆ ನೀರು ಸಂಗ್ರಹಕಾಲೇಜಿಗೆ ಹೊಂದಿಕೊಂಡಂತೆ ಚಿಂತಾಮಣಿ ತಾಲೂಕು ಪಂಚಾಯತಿಗೆ ಸೇರಿದ ೨೦ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳ ಮೇಲ್ಛಾವಣಿಯ ಮಳೆ ನೀರು, ಕಾಲೇಜು ಕಟ್ಟಡಗಳ ಮೇಲ್ಭಾಗದಲ್ಲಿ ಸಂಗ್ರಹವಾಗು ಮಳೆ ನೀರು, ಸಮರ್ಪಕವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಮಳೆಯ ನೀರು ಸಂಪೂರ್ಣವಾಗಿ ಕಾಲೇಜು ಆವರಣ ಹಾಗೂ ಪ್ರವೇಶ ದ್ವಾರದಲ್ಲೇ ನಿಲ್ಲುವುದರಿಂದ ಇಡೀ ಕಾಲೇಜು ಆವರಣ ಕುಂಟೆ ಹಾಗೂ ಕೆಸರುಗದ್ದೆಯಂತಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರು ಇಲ್ಲಿಯೇ ನಡೆದುಕೊಂಡು ಬರಬೇಕಾದ ದುಸ್ಥಿತಿ ಎದುರಾಗಿದ್ದು, ಹಲವರು ಜಾರಿ ಬಿದ್ದು ಕೆಸರಿನ ಅಭಿಷೇಕ ಮಾಡಿಸಿಕೊಂಡ ಘಟನೆಗಳು ನಡೆದಿವೆ.
ಶೌಚಾಲಯ ಅವ್ಯವಸ್ಥೆಸುಮಾರು ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಶೌಚಾಲಯವು ಶಿಥಿಲಾವಸ್ಥೆಯಲ್ಲಿದ್ದು ಸಹಸ್ರಾರು ಮಂದಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರ ಶೌಚಾಲಯದ ಯುಜಿಡಿ ನೀರು ಸಮರ್ಪಕವಾಗಿ ಹರಿಯದೆ ನಿಂತು ಹೋಗುವುದರಿಂದ ಅದರ ದುರ್ನಾತ ಅಸಹನೀಯವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಬರುವ ನೂರಾರು ವಿದ್ಯಾರ್ಥಿನಿಯರು ಮಧ್ಯಾಹ್ನದ ಊಟವನ್ನು ಇದೇ ಮಣ್ಣಿನ ಮೇಲ್ಭಾಗದಲ್ಲಿ ಕುಳಿತುಕೊಂಡು ಸೇವನೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ನಗರದ ಪ್ರಮುಖ ಪಪೂ ಕಾಲೇಜುಗಳಲ್ಲಿ ಒಂದಾದ ಈ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಇದರಿಂದಾಗಿ ಕಾಲೇಜು ಆವರಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.