ಧಾರವಾಡ:

ತಾಲೂಕಿನ ಗರಗ ಗ್ರಾಮದ ಇತ್ತೀಚೆಗೆ ನಡೆದ ಬಾಲಕಿಯ ಆತ್ಮಹತ್ಯೆ ಪ್ರಕರಣವು ಇದೀಗ ಗಂಭೀರತೆ ಪಡೆದಿದ್ದು, ಬಾಲಕಿಯ ತಂದೆ-ತಾಯಿ ಹೇಳಿಕೆ ಆಧರಿಸಿ ಎಫ್‌ಐಆರ್‌ ಪರಿಷ್ಕೃತಗೊಳಿಸಲಾಗಿದೆ. ಜತೆಗೆ ಪೋಕ್ಸೋ ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ಪ್ರಕರಣ ದಾಖಲಿಸಿ ಆರೋಪಿ ಉಪ್ಪಿನ ಬೆಟಗೇರಿಯ ನದೀಮ್‌ ಬೇಗ್‌ ಎಂಬಾತನನ್ನು ಗರಗ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್‌ ಆರ್ಯ, ಮೇ 8ರಂದು 17 ವರ್ಷದ ಈ ಬಾಲಕಿ ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿ ಆಗದೇ ಮೇ 9ರಂದು ಮೃತಪಟ್ಟಿದ್ದಳು. ಈ ಕುರಿತಾಗಿ ಗರಗ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿತ್ತು. ಮೇ 28ರಂದು ಬಾಲಕಿಯ ತಂದೆ ಪರಿಷ್ಕೃತ ದೂರು ನೀಡಿ, ಮಗಳ ಸಾವಿಗೆ ಆರೋಪಿ ಉಪ್ಪಿನ ಬೆಟಗೇರಿಯ ನಯಿಮ್ ಬೇಗ ಕಾರಣ. ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ನಯಿಮ್‌ ಬೇಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದರು.

ಈ ಮಧ್ಯೆ ಮೃತಪಟ್ಟ ಬಾಲಕಿಯ ಪಾಲಕರು ಹಲವು ಬಾರಿ ಗರಗ ಪೊಲೀಸ್‌ ಠಾಣೆಗೆ ಹೋಗಿ ತನಿಖೆ ಬಗ್ಗೆ ವಿಚಾರಿಸಿದರೂ ಸರಿಯಾಗಿ ಮಾಹಿತಿ ಕೊಟ್ಟಿಲ್ಲ. ಆರಂಭದಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಬೇಕಿತ್ತು. ಗರಗ ಪೊಲೀಸರು ಈ ಪ್ರಕರಣದಲ್ಲಿ ನಿಷ್ಕಾಳಜಿ ತೋರಿದ್ದು, ಕೂಡಲೇ ಆರೋಪಿಯನ್ನು ಬಂಧಿಸಬೇಕು ಇದೊಂದು ಲವ್‌ ಜಿಹಾದ್‌ ಪ್ರಕರಣವಾಗಿದ್ದು, ಪೊಲೀಸರು ಗಂಭೀರತೆಯಿಂದ ವಿಚಾರಣೆ ನಡೆಸುತ್ತಿಲ್ಲ, ಆರೋಪಿಯನ್ನು ಬಂಧಿಸಿಲ್ಲ ಎಂದು ಶ್ರೀರಾಮಸೇನೆ ಹಾಗೂ ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದ್ದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹೇಮಾವತಿ ಸುದ್ದಿಗೋಷ್ಠಿ ನಡೆಸಿ, ಆರೋಪಿ ನಯೀಮ್‌ ಬೇಗ್‌, ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪ್ರೀತಿಯ ನಾಟಕವಾಡಿ ಹಿಜಾಬ್‌, ನಕಾಬ್‌, ಬುರ್ಖಾ ತೊಡಿಸಿ ಜಿಹಾದ್‌ಗೆ ಯತ್ನಿಸಿದ್ದಾನೆ, ಅವಳೊಂದಿಗಿರುವ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದರು.


ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಸಹ ಸುದ್ದಿಗೋಷ್ಠಿ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರು ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಇದೊಂದು ಸ್ಪಷ್ಟ ಲವ್‌ ಜಿಹಾದ್‌ ಕೇಸಾಗಿದ್ದರೂ ಅಸ್ವಾಭಾವಿಕ ಸಾವೆಂದು ಬಿಂಬಿಸಿದ್ದು ಆರೋಪಿಯನ್ನು ಗಲ್ಲಿಗೇರಿಸಬೇಕು, ಸಂತ್ರಸ್ತ ಯುವತಿ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧಿಸಿದ್ದಾರೆ.