ಬಾಲಕಿಗೆ ಬೆದರಿಕೆ, ಯೂಟ್ಯೂಬ್ ಚಾನೆಲ್ ವರದಿಗಾರ ಸೇರಿ ಇಬ್ಬರ ಬಂಧನ

| Published : Jan 12 2025, 01:20 AM IST

ಸಾರಾಂಶ

ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟು ಸಂತ್ರಸ್ತೆಗೆ ಬೆದರಿಕೆಯೊಡ್ಡಿದ್ದ ಆರೋಪದಡಿ ಇಬ್ಬರನ್ನು ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಹಣಕ್ಕಾಗಿ ಬೇಡಿಕೆಯಿಟ್ಟು ಸಂತ್ರಸ್ತೆಗೆ ಬೆದರಿಕೆಯೊಡ್ಡಿದ್ದ ಆರೋಪದಡಿ ಇಬ್ಬರನ್ನು ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.‘2024ರಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದ ವಿಚಾರಣೆ ನಡೆಸುತ್ತಿರುವ ತ್ವರಿತಗತಿ ನ್ಯಾಯಾಲಯ, ಇಬ್ಬರ ಬಂಧನಕ್ಕೆ ಜಾಮೀನುರಹಿತ ವಾರೆಂಟ್ ಹೊರಡಿಸಿತ್ತು. ಅದರನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಪವನ್ ಹಾಗೂ ಮಹದೇವಪ್ಪ ಮಾಳಮ್ಮನವರ ಅವರನ್ನು ಬಂಧಿಸಲಾಗಿದೆ. ಅವರಿಬ್ಬರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಎಸ್ಪಿ ಅಂಶುಕುಮಾರ ತಿಳಿಸಿದರು.

‘ಬಾಲಕಿಯ ಮಾವ ನೀಡಿದ್ದ ದೂರಿನಡಿ ಹಿರೇಕೆರೂರು ಠಾಣೆಯಲ್ಲಿ 2024ರಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿಯನ್ನು ಬಾಲ್ಯವಿವಾಹ ಆಗಿದ್ದಾನೆ ಎನ್ನಲಾದ ಯುವಕ, ಅವರ ಸಂಬಂಧಿಕರು ಹಾಗೂ ಬಾಲಕಿಯ ಪೋಷಕರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಎಲ್ಲರ ವಿರುದ್ಧವೂ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದರು.

ಆರೋಪಿಗಳ ಕೃತ್ಯದ ಬಗ್ಗೆ ಬಾಲಕಿ, ಸಿಆರ್‌ಪಿಸಿ 164ರಡಿ ನ್ಯಾಯಾಲಯದಲ್ಲಿ ಇತ್ತೀಚೆಗೆ ಹೇಳಿಕೆ ದಾಖಲಿಸಿದ್ದಾರೆ. ಇದೇ ದಾಖಲೆ ಆಧರಿಸಿ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಆರೋಪಿಗಳ ಪೈಕಿ ಮಹಿಳೆಯೊಬ್ಬರು ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಕರಣ ಮುಚ್ಚಿಹಾಕಲು ಹಣಕ್ಕೆ ಬೇಡಿಕೆ: ‘ಬಾಲಕಿಯನ್ನು ಬಾಲ್ಯವಿವಾಹವಾಗಿದ್ದ ಯುವಕ, ಮನೆಯಲ್ಲಿ ಇರಿಸಿಕೊಂಡಿದ್ದ. ಈ ವಿಷಯ ‘ಜೆ.ಕೆ. ನ್ಯೂಸ್ ಕನ್ನಡ’ ಯೂಟ್ಯೂಬ್ ಚಾನೆಲ್ ವರದಿಗಾರನೆಂದು ಹೇಳಿಕೊಂಡು ಓಡಾಡುತ್ತಿದ್ದ ಪವನ್‌ಗೆ ಗೊತ್ತಾಗಿತ್ತು. ಇತರೆ ಆರೋಪಿಗಳ ಜೊತೆ ಸೇರಿಕೊಂಡು ಯುವಕನ ಮನೆಗೆ ಹೋಗಿದ್ದ ಆರೋಪಿಗಳು, ಪ್ರಕರಣವನ್ನು ರಾಜಿ ಮೂಲಕ ಸಂಧಾನ ಮಾಡಿಸುವುದಾಗಿ ಹೇಳಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‘ಬಾಲಕಿಯನ್ನು ಮದುವೆಯಾಗಿರುವುದು ಕಾನೂನು ಬಾಹಿರ. ಮನೆಯವರೆಲ್ಲರೂ ಕೋರ್ಟ್–ಕಚೇರಿ ಅಲೆಯಬೇಕಾಗುತ್ತದೆ. ನಾವೆಲ್ಲರೂ ಸೇರಿಕೊಂಡು ಪ್ರಕರಣವನ್ನು ರಾಜೀ ಮಾಡಿಸುತ್ತೇವೆ’ ಎಂದಿದ್ದ ಆರೋಪಿಗಳು, ಯುವಕನಿಂದ ಹಣ ಪಡೆದುಕೊಂಡಿದ್ದರು. ಎರಡನೇ ಬಾರಿಯೂ ಹಣ ಕೇಳಲು ಯುವಕನ ಬಳಿ ಹೋಗಿದ್ದರು. ಬೇಸತ್ತಿದ್ದ ಯುವಕ, ಬಾಲಕಿಗೆ ವಿಷಯ ತಿಳಿಸಿದ್ದರು. ಅವಾಗಲೇ ಬಾಲಕಿ, ಆರೋಪಿಗಳನ್ನು ಪ್ರಶ್ನಿಸಿದ್ದರು. ಬಾಲಕಿಗೂ ಬೆದರಿಕೆ ಹಾಕಿದ್ದ ಆರೋಪಿಗಳು, ‘ಹಣ ಕೊಟ್ಟರೆ ರಾಜಿ ಮಾಡಿಸುತ್ತೇನೆ. ಏನು ಆಗುವುದಿಲ್ಲ. ಇಲ್ಲದಿದ್ದರೆ, ಎಲ್ಲರಿಗೂ ತೊಂದರೆ ಆಗಲಿದೆ’ ಎಂದಿದ್ದರು. ಇದೇ ಸಂಗತಿಯನ್ನು ಬಾಲಕಿ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದರು’ ಎಂದು ಮೂಲಗಳು ಹೇಳಿವೆ.