ಹೆಣ್ಣು ಮಕ್ಕಳು ಪೋಕ್ಸೋ ಪ್ರಕರಣಗಳಿಗೆ ಬಲಿಯಾಗದಿರಲಿ

| Published : Feb 07 2024, 01:50 AM IST

ಸಾರಾಂಶ

ಹದಿಹರೆಯದ ಮಕ್ಕಳಲ್ಲಿ ಅಂದರೆ ಹದಿನಾಲ್ಕರಿಂದ ಹದಿನೆಂಟು ವರ್ಷದ ಒಳಗಿನ ಮಕ್ಕಳಲ್ಲಿ ಲೈಂಗಿಕ ಆಸಕ್ತಿಯಿಂದ ಅನಾಹುತಗಳು ನಡೆಯುತ್ತಿವೆ. ಬಹುತೇಕ ಪೋಕ್ಸೊ ಕಾಯಿದೆ ಪ್ರಕರಣಗಳ ಗೌಪ್ಯ ವಿಚಾರಣೆಯಲ್ಲಿ ಇದು ತಿಳಿದುಬಂದಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿನ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ಉಪ ಕಾರಾಗೃಹಗಳಲ್ಲಿರುವ ಕೈದಿಗಳ ಪೈಕಿ ಶೇ. 20ರಷ್ಟು ಕೈದಿಗಳು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದವರಾಗಿದ್ದಾರೆ. ಹಣ್ಣು ಮಕ್ಕಳು ಇಂತಹ ಪ್ರಕರಣಗಳಿಗೆ ಬಲಿಯಾಗದೆ ವಿದ್ಯಾಭ್ಯಾಸಕ್ಕೆ ಗಮನ ನೀಡಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣಕುಮಾರಿ ಕಿವಿಮಾತು ಹೇಳಿದರು. ಚಿಕ್ಕಬಳ್ಳಾಪುರದ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ, ಬೆಂಗಳೂರಿ ಸೋನೋ ಇಟಿಯೋಸ್ ಕಂಪನಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ವತಿಯಿಂದ ತಾಲೂಕಿನ ಆವಲಗುರ್ಕಿ ಸರ್ಕಾರಿ ಪ್ರೌಢಶಾಲೆಗೆ ಉಚಿತ ಕಂಪ್ಯೂಟರ್ ವಿತರಣೆ ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ಅರಿವು ಸಮಾರಂಭವನ್ನು ಶಾಲಾ ಆವರಣದಲ್ಲಿ ಗಿಡಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹದಿಹರೆಯದಲ್ಲಿ ಎಚ್ಚರ ವಹಿಸಿ

ಹದಿಹರೆಯದ ಮಕ್ಕಳಲ್ಲಿ ಅಂದರೆ ಹದಿನಾಲ್ಕರಿಂದ ಹದಿನೆಂಟು ವರ್ಷದ ಒಳಗಿನ ಮಕ್ಕಳಲ್ಲಿ ಲೈಂಗಿಕ ಆಸಕ್ತಿಯಿಂದ ಅನಾಹುತಗಳು ನಡೆಯುತ್ತಿವೆ. ಬಹುತೇಕ ಪೋಕ್ಸೊ ಕಾಯಿದೆ ಪ್ರಕರಣಗಳ ಗೌಪ್ಯ ವಿಚಾರಣೆಯಲ್ಲಿ ಇದು ತಿಳಿದುಬಂದಿದೆ. ಬಾಲಕ, ಬಾಲಕಿಯರಲ್ಲಿ ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗೋದು ಗಂಡು ಮಕ್ಕಳಿಗೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು. ಹನ್ನೆರಡರಿಂದ ಇಪ್ಪತ್ತೆರಡನೆ ವಯಸ್ಸಿನವರೆಗೂ ಓದಿ ಉತ್ತಮವಾದ ಜೀವನ ಕಂಡುಕೊಳ್ಳುವ ಬೇಕಾದ ವಯಸ್ಸಲ್ಲಿ ಕ್ಷಣಿಕ ಸುಖದಿಂದ ಇಡೀ ಜೀವನ ಹಾಳು ಮಾಡಿಕೊಳ್ಳುತ್ತೀರಿ. ಪೋಷಕರು ಸಹ ತಮ್ಮ ಮಕ್ಕಳ ಚಟುವಟಿಕೆಗಳ ಬಗ್ಗೆ ಪ್ರತಿನಿತ್ಯ ನಿಗಾ ಇಟ್ಟಿರಬೇಕು ಎಂದರು. ಸಮಾಜ ಸೇವೆ ಮಾಡಿ

ಬೆಂಗಳೂರು ಮೂಲದ ಸೋನೋ ಇಟಿಯೋಸ್ ಕಂಪನಿ ಎಚ್ ಆರ್ ಮಮಿತಾ ಭಟ್ಟಾಚಾರ್ಯ ಮಾತನಾಡಿ, ಪ್ರೌಡಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿದ್ದೀರಿ. ಗ್ರಾಮೀಣ ಭಾಗದ ಮಕ್ಕಳು ನೀವೆಲ್ಲಾ ಮುಂದೆ ಉತ್ತಮ ಹುದ್ದೆಗಳನ್ನು ಅಲಂಕರಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ಮಾತನಾಡಿ, ಸಮಾನ ಮನಸ್ಕರ ಸಂರಕ್ಷಣಾ ವೇದಿಕೆ ಸದಸ್ಯರು ಆವಲಗುರ್ಕಿ ಶಾಲೆಯನ್ನು ಗುರ್ತಿಸಿ ಕಂಪ್ಯೂಟರ್ ವಿತರಿಸಿರುವುದು ಶ್ಲಾಘನೀಯ. ಆ ಎಲ್ಲ ಗಣಕಯಂತ್ರಗಳ ಬಳಕೆಯಾಗಬೇಕು. ಅದರಿಂದ ಮಕ್ಕಳಿಗೆ ಕಂಪ್ಯೂಟರ್ ಜ್ಞಾನ ಅರಿಯಲು ಉಪಕಾರಿಯಾಗುತ್ತದೆ ಎಂದರು. ಶಾಲೆಗೆ 25 ಕಂಪ್ಯೂಟರ್‌ ಕೊಡುಗೆ

ಬೆಂಗಳೂರು ಮೂಲದ ಸೋನೋ ಎಟಿಯೋಸ್ ಕಂಪನಿ ಹೆಚ್ ಆರ್ ಮಮಿತಾ ಭಟ್ಟಾಚಾರ್ಯ, ಟ್ರೈನಿಂಗ್ ಹೆಡ್ ಅಮೋಘ್ ವರ್ಹಾಪಾಂಡೆ ಮತ್ತು ಪವನ್ ಕುಮಾರ್ ಆವಲಗುರ್ಕಿ ಸರ್ಕಾರಿ ಪ್ರೌಡಶಾಲೆಗೆ ಇಪ್ಪತೈದು ಕಂಪ್ಯೂಟರ್ ಗಳನ್ನು ಹಸ್ತಾಂತರ ಮಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಸರ ಪ್ರೇಮಿ ಗುಂಪುಮರದ ಆನಂದ್, ಆವಲಗುರ್ಕಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿಯಪ್ಪ, ಹೊನ್ನಗಿರಿಯಪನಹಳ್ಳಿ ಸಮಾಜ ಸೇವಕ ಹೊಟೆಲ್ ರಾಮಣ್ಣ, ಆವಲಗುರ್ಕಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್, ಸಮಾನ ಮನಸ್ಕರ ಸಂಘದ ಸದಸ್ಯ ಹಾಗೂ ವಕೀಲ ಆರ್. ಮಟಮಪ್ಪ ಮಕ್ಕಳಿಗೆ ಹಿತವಚನ ಹೇಳಿದರು.ಆವಲಗುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿ ಕೆ.ಎಂ. ರೆಡ್ಡಪ್ಪರನ್ನು ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಆವಲಗುರ್ಕಿ ಗ್ರಾಪಂ ಅಧ್ಯೆಕ್ಷೆ ನಾಗವೇಣಿ ಸುದರ್ಶನ್, ಸರ್ ಎಂವಿ ಕಾರ್ಮಿಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಪ್ರಕಾಶ್, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್, ವಕೀಲ ಮಂಜುನಾಥರೆಡ್ಡಿ ಮತ್ತಿತರರು ಇದ್ದರು.