ಸಾರಾಂಶ
ಚಿತ್ರದುರ್ಗ: ಹೆಣ್ಣುಮಕ್ಕಳು ಬೇರೆಯವರ ಮೇಲೆ ಅವಲಂಬಿತರಾಗದೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುಬ್ರಾನಾಯ್ಕ್ ಹೇಳಿದರು.
ದಮ್ಮಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಮತ್ತು ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಸಿಕೊಡಬೇಕೆಂದು ಸಲಹೆ ನೀಡಿದರು.ಸಾಮಾಜಿಕ ಕಾರ್ಯಕರ್ತೆ ಮತ್ತು ಮಹಿಳಾ ಉದ್ಯಮಿ ವೀಣಾ ಬಾಬಣ್ಣ ಮಾತನಾಡಿ, ರಾಜ್ಯ ಸರ್ಕಾರ ಮಹಿಳೆಯರಲ್ಲಿ ಶಕ್ತಿ ತುಂಬುವ ಕೆಲಸಕ್ಕೆ ಒತ್ತು ನೀಡಿದ್ದು, ಹಲವು ಮಹಿಳಾಪರ ಯೋಜನೆಗಳನ್ನು ಜಾರಿಗೊಳಿಸಿದೆ. ಹಾಗೆಯೇ ಸ್ಥಳೀಯ ಶಾಸಕರ ಕಚೇರಿಯಿಂದಲೂ ಕೂಡ ಮಹಿಳೆಯರಿಗಾಗಿ ಉಚಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕಿಶೋರಿಯರಿಗೆ ಆದ್ಯತೆ ನೀಡಿ, ಆರೋಗ್ಯ, ಸ್ವಚ್ಛತೆ, ಸ್ವಾವಲಂಬನೆಗಾಗಿ ತರಬೇತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ವಿಮುಕ್ತಿ ವಿದ್ಯಾಸಂಸ್ಥೆ ಮಹಿಳೆಯರ ಪರವಾದ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ವಿಶೇಷವಾಗಿದೆ ಎಂದು ಶ್ಲಾಘಿಸಿದರು.
ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ನಾರದಮುನಿ ಮಾತನಾಡಿ, ಆಯುಷ್ ಇಲಾಖೆ ಔಷಧಿ ಮತ್ತು ಯೋಗವನ್ನು ವಿಶೇಷ ಆದ್ಯತೆಯಾಗಿ ಕೆಲಸ ಮಾಡಲಾಗುತ್ತಿದೆ. ಆಯುಷ್ ಆಸ್ಪತ್ರೆಯ ಮೂಲಕ 3ನೇ ತರಗತಿಯ ಬಾಲಕಿಗೆ ಯೋಗಾಭ್ಯಾಸ ಹೇಳಿಕೊಡುವ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಿದರು.ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ ವಿಶ್ವಸಾಗರ್, ನಿರ್ದೇಶಕ ಆರ್.ವಿಶ್ವಸಾಗರ್, ಆಯುಷ್ ಇಲಾಖೆಯ ಡಾ.ನಾಗರಾಜನಾಯ್ಕ್, ಕಲಾವಿದ ಪಾಂಡುರಂಗಪ್ಪ, ವಿಮುಕ್ತಿ ಸಂಸ್ಥೆಯ ಸಂಯೋಜಕ ಬಿಬಿ ಜಾನ್, ನಾಗರತ್ನ, ಅರಣ್ಯಸಾಗರ್, ಸರೋವರ್ ಬೆಂಕಿಕೆರೆ ಇದ್ದರು.