ಗೀತಾಂಜಲಿ ಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ

| Published : Nov 18 2024, 12:02 AM IST

ಸಾರಾಂಶ

ಶಿಕ್ಷಕ ಶ್ರವಣ್‌ ಮತ್ತು ವಿದ್ಯಾರ್ಥಿ ತಂಡವು ರೋಬೋಟಿಕ್ಸ್‌ನಲ್ಲಿ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಹೇಗೆ ಚಾಲನೆ ಆಗುವುದರ ಬಗ್ಗೆ ಹಾಗೂ ಕಂಪ್ಯೂಟರ್‌ ಸೈನ್ಸ್‌(ಕೋಡಿಂಗ್‌) ಬಗ್ಗೆ ಮಾಡೆಲ್‌ಗಳ ಪ್ರದರ್ಶನ, ಶಿಕ್ಷಕಿ ಶ್ರುತಿ ಮತ್ತು ವಿದ್ಯಾರ್ಥಿಗಳ ತಂಡವು ಭಾರತೀಯ ಸಂಸತ್ತಿನ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಸದನದ ವರೆಗೂ ರಾಜಕೀಯ ವಿಶ್ಲೇಷಣೆಯು ಹೇಗಿರುತ್ತದೆ ಎಂಬುದನ್ನು ಕುರಿತು ವಿವರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಗೀತಾಂಜಲಿ ಇಂಟರ್‌ ನ್ಯಾಷನಲ್ ಶಾಲೆ (ಸಿಬಿಎಸ್‌ಇ)ಯಲ್ಲಿ ಗೀತಾಂಜಲಿ ಲೈಫ್ ಎಕ್ಸ್-ಪೋ ಮೀ ಅಂಡ್ ಸೊಸೈಟಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಹಾಗೂ ಮಾಹಿತಿ ವಿಶ್ಲೇಷಣೆ ನೀಡಿದರು. ಹಳ್ಳಿಯಿಂದ ದಿಲ್ಲಿವರೆಗೆ ಬ್ಯಾಂಕಿಂಗ್‌ ಸೇವೆ, ನ್ಯಾಯಾಲಯಗಳು ಹಾಗೂ ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಸೇರಿದಂತೆ ಹಲವು ವೈಜ್ಞಾನಿಕ ಮಾದರಿಯು ಪ್ರದರ್ಶನ ಮೇಳೈಸಿದವು.

ವಿದ್ಯಾರ್ಥಿಗಳು ಪ್ರತಿ ಹಂತದ ಪ್ರದರ್ಶನದಲ್ಲಿಯೂ ತಮ್ಮ ಕೌಶಲ್ಯತೆ ತೋರಿದರು. ಇದಕ್ಕೆ ಶಿಕ್ಷಕರು ಸಾಥ್‌ ನೀಡಿದರು. ತಮ್ಮದೇ ಶೈಲಿಯ ನಿರೂಪಣೆಯಿಂದ ಗಣ್ಯರು ಮತ್ತು ಪ್ರೇಕ್ಷಕರಿಗೆ ಮಾದರಿಗಳ ವಿವರಣೆ ನೀಡುತ್ತಿದ್ದ ವಿದ್ಯಾರ್ಥಿಗಳ ಕೌಶಲ್ಯತೆ ಮೆಚ್ಚುಗೆ ಪಡೆಯಿತು.

ಶಿಕ್ಷಕ ಶ್ರವಣ್‌ ಮತ್ತು ವಿದ್ಯಾರ್ಥಿ ತಂಡವು ರೋಬೋಟಿಕ್ಸ್‌ನಲ್ಲಿ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಹೇಗೆ ಚಾಲನೆ ಆಗುವುದರ ಬಗ್ಗೆ ಹಾಗೂ ಕಂಪ್ಯೂಟರ್‌ ಸೈನ್ಸ್‌(ಕೋಡಿಂಗ್‌) ಬಗ್ಗೆ ಮಾಡೆಲ್‌ಗಳ ಪ್ರದರ್ಶನ, ಶಿಕ್ಷಕಿ ಶ್ರುತಿ ಮತ್ತು ವಿದ್ಯಾರ್ಥಿಗಳ ತಂಡವು ಭಾರತೀಯ ಸಂಸತ್ತಿನ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಸದನದ ವರೆಗೂ ರಾಜಕೀಯ ವಿಶ್ಲೇಷಣೆಯು ಹೇಗಿರುತ್ತದೆ ಎಂಬುದನ್ನು ಕುರಿತು ವಿವರಿಸಿದರು.

ಪೊಲೀಸ್‌ ಇಲಾಖೆಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಪೊಲೀಸರು ಮತ್ತು ವಕೀಲರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಶಿಕ್ಷಕಿ ಶಿವರತ್ನ ಮತ್ತು ವಿದ್ಯಾರ್ಥಿಗಳ ತಂಡದವರು ಮಾಹಿತಿ ನೀಡಿದರು. ಶಿಕ್ಷಕಿ ಮೋಕ್ಷದಾಯಿನಿ ಮತ್ತು ವಿದ್ಯಾರ್ಥಿಗಳಿಂದ ವೇದಿಕ್‌ ಗಣಿತ, ಜಪಾನೀಸ್‌ ಬಳಸುವ ಗಣಿತ ವಿಧಾನಗಳ ಮಾದರಿ ಪ್ರದರ್ಶಿಸಿದರು.

ಶಿಕ್ಷಕಿ ತೋಫಿಯಾ ಮತ್ತು ವಿದ್ಯಾರ್ಥಿ ತಂಡವು, ಗ್ರಾಮೀಣ ಬ್ಯಾಂಕ್‌ನಿಂದ ಭಾರತೀಯ ರಿಸರ್ವ್ ಬ್ಯಾಂಕ್‌ವರೆಗೂ ಯಾವ ರೀತಿ ಕಾರ್ಯಗಳು ಇರುತ್ತವೆ ಎಂಬುದನ್ನುತೋರಿಸಿದರೆ, ಶಿಕ್ಷಕಿ ಚಂದನಾ ಮತ್ತು ವಿದ್ಯಾರ್ಥಿ ತಂಡದವರು ಎಸ್‌ಎಸ್‌ಎಲ್‌ಸಿ, ಪಿಯುಸಿ ಮುಗಿದ ಮೇಲೆ ಯಾವ ವಿಷಯ ಓದಬೇಕು ಎನ್ನುವುದು ಸೇರಿದಂತೆ ಕಡಿಮೆ ಅಂಕ ಪಡೆದು ಪಾಸಾಗಿರುವವರು ಭವಿಷ್ಯ ರೂಪಿಸಿಕೊಳ್ಳಲು ಯಾವ ವಿಷಯ ಅಧ್ಯಯನ ಮಾಡಬೇಕು ಎಂಬ ಮಾಹಿತಿ ನೀಡಿದರು.

ಪ್ರದರ್ಶನಕ್ಕೆ ಚಾಲನೆ ನೀಡಿದ ಎಸ್‌ಬಿಇಟಿ ಅಧ್ಯಕ್ಷ ಬಿ.ಶಿವಲಿಂಗಯ್ಯ, ವಿದ್ಯಾರ್ಥಿ ದಿಸೆಯಲ್ಲಿಯೇ ವಿಜ್ಞಾನ ಮತ್ತು ಕಂಪ್ಯೂಟರ್‌ ಜ್ಞಾನ ಹೆಚ್ಚಿಸಿಕೊಂಡರೆ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಬಹಳಷ್ಟು ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ ಬಗ್ಗೆ ಆಸಕ್ತಿ ತೋರಿಸಿ ವಿಜ್ಞಾನ ವಸ್ತು ಪ್ರದರ್ಶನ ಮಾಡಿದ್ದಾರೆ ಎಂದರು.

ಎಸ್‌ಬಿಇಟಿ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಪಾರಂಪರಿಕ ಜ್ಞಾನವನ್ನು ವಿದ್ಯಾರ್ಥಿಗಳು ವಿಜ್ಞಾನದ ಹೊಸ ಆಲೋಚನೆಗಳೊಂದಿಗೆ ಹೊಂದಬೇಕು. ಗೀತಾಂಜಲಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು, ಕಂಪ್ಯೂಟರ್ ತರಬೇತಿ ಕೊಟ್ಟು ವಿಜ್ಞಾನದ ಬಗ್ಗೆ ಪ್ರಯೋಗಗಳ ಬಗ್ಗೆ ಪ್ರದರ್ಶನ ಏರ್ಪಡಿಸಿದ್ದಾರೆ. ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಿಗೆ ಹಾಗೂ ಪೋಷಕರಿಗೆ ವಿಶೇಷ ಮಾಹಿತಿ ಕೊಡಲು ಇದರಿಂದ ಅವಕಾಶವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಪ್ರಾಂಶುಪಾಲೆ ಎಚ್‌.ಸರೋಜಾ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಕೌಶಲ್ಯ ಮತ್ತು ಸೃಜನಶೀಲತೆ ಹೆಚ್ಚಿಸಿದೆ. ಇಂತಹ ಪ್ರದರ್ಶನಗಳು ವಿದ್ಯಾರ್ಥಿಗಳ ಸಾಮಾಜಿಕ ಕೌಶಲ್ಯಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ವಿದ್ಯಾ, ಮಾಂಡವ್ಯ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸ್ ಭಾಗವಹಿಸಿದ್ದರು.