ನೂರು ದಿನದ ಕೂಲಿ ನೀಡಿ: ಪಿಡಿಒ ಶಿವಕುಮಾರ್‌ಗೆ ಮಹಿಳೆಯರ ತರಾಟೆ

| Published : Nov 29 2024, 01:04 AM IST

ನೂರು ದಿನದ ಕೂಲಿ ನೀಡಿ: ಪಿಡಿಒ ಶಿವಕುಮಾರ್‌ಗೆ ಮಹಿಳೆಯರ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಯಳಂದೂರಿನ ಯರಿಯೂರು ಗ್ರಾಮದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಪಿಡಿಒ ಶಿವಕುಮಾರ್ ಅವರನ್ನು ಮಹಿಳೆಯರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಯಳಂದೂರು

ನರೇಗಾ ಯೋಜನೆಯಲ್ಲಿ ಉದ್ಯೋಗ ಚೀಟಿ ಹೊಂದಿರುವ ಕೂಲಿ ಕಾರ್ಮಿಕರಿಗೆ ಸಬೂಬು ಹೇಳದೆ ನೂರು ದಿನ ಕೂಲಿ ಕೆಲಸ ನೀಡಿ ಎಂದು ಪಿಡಿಒ ಶಿವಕುಮಾರ್‌ಗೆ ಮಹಿಳೆಯರು ಗ್ರಾಮ ಸಭೆಯಲ್ಲಿ ತರಾಟೆ ತೆಗೆದುಕೊಂಡ ಪ್ರಸಂಗ ಗುರುವಾರ ನಡೆಯಿತು.

ಯರಿಯೂರು ಗ್ರಾಮದ ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ಮಹಿಳೆಯರಿಗೆ ನೂರು ದಿನಗಳ ಕಾಲ ಉದ್ಯೋಗ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಗಳು ಇದೆ. ಆದರೆ, ಸ್ಥಳೀಯ ಗ್ರಾಪಂ ಪಿಡಿಒ, ಅರ್ಹರಿಗೆ ಕೂಲಿ ಕೆಲಸ ನೀಡಲು ನಿರ್ಲಕ್ಷ್ಯ ತೋರಿ ಕೆಲವು ಉಳ್ಳವರ ಪರ ನಿಂತು ಅವರಿಗೆ ಅಭಿವೃದ್ದಿ ಕಾಮಗಾರಿಗಳ ನಡೆಸುವ ಸಂದರ್ಭದಲ್ಲಿ ಜಾಬ್ ಕಾರ್ಡನಲ್ಲಿ ಇಲ್ಲದ ಜನರನ್ನು ಕರೆತಂದು ಕೂಲಿ ಕೆಲಸ ಮಾಡಿಸಿ ನಕಲಿ ಪೋಟೋ ತೆಗೆದು ಮನೆಯಲ್ಲಿ ಇರುವ ಜನರ ಉದ್ಯೋಗ ಚೀಟಿಗೆ ಹಣ ಜಮೆ ಮಾಡಿಸುತ್ತಿದ್ದಾರೆ. ಇದರಿಂದ ನಿಜವಾದ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ಬೇರೆ ಊರುಗಳಿಗೆ ಗುಳೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೂಲಿ ಕಾರ್ಮಿಕ ಮಂಗಳಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಅನ್ಯಾಯವಾಗಿದೆ, ದೂರು ನೀಡುತ್ತೇವೆ:

ಪಾರದರ್ಶಕವಾಗಿ ನೂರು ದಿನ ನಮಗೆ ಕೂಲಿ ಕೆಲಸ ನೀಡಬೇಕು. ಇಲ್ಲವಾದರೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡುವುದಾಗಿ ಪಿಡಿಒ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ದುರ್ನಾಥ ತಪ್ಪಿಸಿ:3ನೇ ವಾರ್ಡನಲ್ಲಿ ಸರಿಯಾದ ರೀತಿ ಚರಂಡಿ ಹೂಳು ತೆಗೆಸದೆ ಇರುವುದರಿಂದ ಚರಂಡಿ ದುರ್ನಾಥ ಬೀರುತ್ತಿದೆ. ರಾತ್ರಿ ಪಾಳಿಯಲ್ಲಿ ಸೊಳ್ಳೆಗಳು ಜಾಸ್ತಿಯಾಗಿರುವುದರಿಂದ ಮಕ್ಕಳಿಗೆ ಶೀತ, ಜ್ವರ ಸಾಂಕ್ರಾಮಿಕ ರೋಗದ ಭೀತಿ ನಿವಾಸಿಗಳಲ್ಲಿ ಎದುರಾಗಿದ್ದು ತಕ್ಷಣದಲ್ಲಿ ಸ್ವಚ್ಛತೆಗೆ ಮುಂದಾಗಬೇಕಾಗಿದೆ. ಸಭೆಯಲ್ಲಿ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.

ಗೈರಾದ ಅಧಿಕಾರಗಳ ವಿರುದ್ಧ ಶಿಸ್ತು ಕ್ರಮ:

ಗ್ರಾಮ ಸಭೆಗಳಿಗೆ ಅಧಿಕಾರಿ ವರ್ಗ ಗೈರು ಹಾಜರಾದರೆ ಸಾರ್ವಜನಿಕರಿಗೆ ಇಲಾಖೆ ಸೌಲಭ್ಯಗಳ ಮಾಹಿತಿ ನೀಡುವುದು ಹೇಗೆ? ಸರ್ಕಾರದ ಯೋಜನೆಗಳು ರೈತರಿಗೆ ತಿಳಿಸುವುದು ಹೇಗೆ? ಇದರಿಂದ ರೈತಾಪಿ ವರ್ಗಕ್ಕೆ ಸಿಗಬೇಕಾದ ಕೆಲವು ಸೌಲಭ್ಯಗಳು ಮರೀಚಿಕೆಯಾಗಿ ಬಿಡುತ್ತದೆ. ಆದ್ದರಿಂದ ಪತ್ರಿ ಗ್ರಾಮ ಸಭೆಗಳಿಗೆ ಗೈರುಹಾಜರಾಗುವ ಕೃಷಿ ಇಲಾಖೆ, ರೇಷ್ಮೆ, ಸಮಾಜ ಕಲ್ಯಾಣ, ಮೀನುಗಾರಿಕೆ, ಅರಣ್ಯ ಇಲಾಖೆ ಇತರೆ ಇಲಾಖೆ ವಿರುದ್ದ ಶಿಸ್ತು ಕ್ರಮ ಜರುಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಜರುಗಿಸಬೇಕೆಂದು ಗ್ರಾಪಂ ಸದಸ್ಯ ಗಣಿಗನೂರು ರಮೇಶ್ ಸಭೆಯಲ್ಲಿ ಸೂಚನೆ ನೀಡಿದರು.

ಬಾಳೆಗೆ ಪ್ರೋತ್ಸಾಧನ ಜಾಸ್ತಿ:

ತೋಟಗಾರಿಕೆ ಇಲಾಖೆ ಅಧಿಕಾರಿ ಶಿವರಂಜಿನಿ ಮಾತನಾಡಿ, ರೈತರಿಗೆ ಬಾಳೆ, ತೆಂಗು, ವಿಳ್ಯದ ಎಲೆ, ಹನಿ ನೀರಾವರಿ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಧನ ನೀಡುವುದರಿಂದ ರೈತರು ಹೆಚ್ಚಿನ ಲಾಭ ಪಡೆದುಕೊಂಡು ಲಾಭದಾಯಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕೆಂದು ಮನವಿ ಮಾಡಿ ಹೆಚ್ಚಿನ ಮಾಹಿಗಾಗಿ ಯಳಂದೂರು ತೋಟಗಾರಿಕೆ ಇಲಾಖೆ ಬಂದು ಮಾಹಿತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಅನುದಾನ ಕಡಿಮೆ ಸಹಕರಿಸಿ:

ಈಗಾಗಲೇ ನರೇಗಾ ಯೋಜನೆಯಲ್ಲಿ 2.50 ಕೋಟಿ ರು. ವೆಚ್ಚದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅದರಲ್ಲಿ ಕೆರೆ, ಕಾಲುವೆ, ಕೃಷಿಹೊಂಡಾ, ತೋಟಗಾರಿಕೆ ಅರಣ್ಯ, ರೇಷ್ಮೆ ಇಲಾಖೆ, ರೈತರ ವ್ಯಯಕ್ತಿಕ ಕಾಮಗಾರಿಗಳು ಹಲವು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ನರೇಗಾ ಯೋಜನೆಯಲ್ಲಿ ಕಾರ್ಮಿಕರಿಗೆ ನೂರುದಿನ ಕೂಲಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಗ್ರಾಪಂ ಉಪಾಧ್ಯಕ್ಷ ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ 2023-24 ನೇ ಸಾಲೀನ ನರೇಗಾ ಕಾಮಗಾರಿಗಳ ಲೆಕ್ಕ ಪರಿಶೋಧನೆ ಮಾಡಲಾಗಿತ್ತು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅನುಶ್ರೀ, ಬಿಸಿಎಂ ಇಲಾಖೆ ಅಧಿಕಾರಿ ಕುಮಾರ್, ಗ್ರಾಪಂ ಸದಸ್ಯರಾದ ಮಹೇಶ್, ಚಿನ್ನಸ್ವಾಮಿ, ರಾಜೇಶ್, ಎಸ್‌ಡಿಎ ಸೋಮಣ್ಣ ಹಾಜರಿದ್ದರು.