ಕಬ್ಬಿಗೆ ನ್ಯಾಯಯುತ ಲಾಭದಾಯಕ ಬೆಲೆ ನೀಡಿ

| Published : Nov 05 2025, 03:15 AM IST

ಸಾರಾಂಶ

ಸಕ್ಕರೆ ಕಾರ್ಖಾನೆಯವರು ನ್ಯಾಯಯುತ ಲಾಭದಾಯಕ ಬೆಲೆ ಹಾಗೂ ಉಪ ಉತ್ಪನಗಳ ಲಾಭಾಂಶ ನೀಡಲು ಪ್ರತಿವರ್ಷ ಹಿಂದೇಟು ಹಾಕುತ್ತಿದ್ದು, ತೂಕದಲ್ಲಿ ರಿಕವರಿಯಲ್ಲಿ ಸದಾ ರೈತರಿಗೆ ಮೋಸ ಮಾಡುತ್ತಿದ್ದು, ನ್ಯಾಯಯುತ ಲಾಭದಾಯಕ ಬೆಲೆ ನೀಡಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಬ್ಬಿಗೆ ನ್ಯಾಯಯುತ ಲಾಭದಾಯಕ ₹4000 ಬೆಲೆ ಹಾಗೂ ಶೇ.70ರಷ್ಡು ಉಪ ಉತ್ಪನಗಳ ಲಾಭಾಂಶ ಕೊಡಿಸುವುದು ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬಾಗಲಕೋಟೆಯಲ್ಲಿ ಭಾರತೀಯ ಕಿಸಾನ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ರೈತರು ಕಬ್ಬು ಸೇರಿದಂತೆ ಯಾವುದೇ ಬೆಳೆ ಬೆಳೆಯಬೇಕಾದರೆ ರಸಗೋಬ್ಬರ, ಕಳೆನಾಶಕ ಔಷಧಿ, ಕೃಷಿ ಕಾರ್ಮಿಕರಿಗೆ ಎಕರೆಗೆ ₹75 ರಿಂದ ₹80 ಸಾವಿರ ಖರ್ಚು ಮಾಡುತ್ತಿದ್ದು, ಕಬ್ಬು ಕಟಾವು ಸಮಯದಲ್ಲಿ ಸಕ್ಕರೆ ಕಾರ್ಖಾನೆಯವರು ನ್ಯಾಯಯುತ ಲಾಭದಾಯಕ ಬೆಲೆ ಹಾಗೂ ಉಪ ಉತ್ಪನಗಳ ಲಾಭಾಂಶ ನೀಡಲು ಪ್ರತಿವರ್ಷ ಹಿಂದೇಟು ಹಾಕುತ್ತಿದ್ದು, ತೂಕದಲ್ಲಿ ರಿಕವರಿಯಲ್ಲಿ ಸದಾ ರೈತರಿಗೆ ಮೋಸ ಮಾಡುತ್ತಿದ್ದು, ನ್ಯಾಯಯುತ ಲಾಭದಾಯಕ ಬೆಲೆ ನೀಡಬೇಕೆಂದು ಆಗ್ರಹಿಸಿದರು.

ಆಡಳಿತ ಪಕ್ಷದ ಹಾಗೂ ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಮಾಲೀಕತ್ವದ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿದ್ದು, ರೈತರ ಕಷ್ಟಗಳಿಗೆ ಸ್ಪಂದಿಸಿ ನ್ಯಾಯ ಒದಗಿಸಬೇಕಾದ ಸೇವಕರೇ ರೈತರ ರಕ್ತ ಹೀರುವ ಪೀಪಾಸುಗಳಾಗಿದ್ದಾರೆ. ಹೀಗಾಗಿ ರೈತರು ನ್ಯಾಯಯುತ ಲಾಭದಾಯಕ ಬೆಲೆ ನೀಡಬೇಕೆಂದು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಪ್ರತಿವರ್ಷ ಬೀದಿಗಿಳಿದು ಪ್ರತಿಭಟಸಿ ನ್ಯಾಯಕ್ಕಾಗಿ ಹೋರಾಟ ಮಾಡುವುದು ನಮ್ಮ ದುರಂತವೇ ಸರಿ ಎಂದು ಆರೋಪಿಸಿದರು.

ತಕ್ಷಣ ಸಕ್ಕರೆ ಕಾರ್ಖಾನೆ ಮಾಲೀಕರು ಸಾಗಾಣಿಕೆ ವೆಚ್ಚ ತಾವೇ ಭರಿಸಿ, ತೂಕದಲ್ಲಿ ಹಾಗೂ ರಿಕವರಿಯಲ್ಲಿ ಯಾವುದೇ ರೀತಿಯ ಮೋಸ ಮಾಡುವುದಿಲ್ಲವೆಂದು ಟನ್ ಕಬ್ಬಿಗೆ ₹4000 ಬೆಲೆ ನಿಗದಿಪಡಿಸುವ ಹಾಗೂ ಶೇ.70ರಷ್ಟು ಉಪ ಉತ್ಪನಗಳ ಲಾಭಾಂಶ ತಕ್ಷಣ ನೀಡುವ ಬಗ್ಗೆ ರೈತರಿಗೆ ಲಿಖಿತವಾಗಿ ನೀಡಿ ಕಾರ್ಖಾನೆ ಪ್ರಾರಂಭಿಸಬೇಕು. ಈಗಾಗಲೇ ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಶೇ.100 ರೈತರ ಬೆಳೆಗಳು ಹಾನಿಯಾಗಿದ್ದು , ಕಂದಾಯ ಇಲಾಖೆ ಕೆಲವು ಅಧಿಕಾರಿಗಳು ರೈತರ ಜಮೀನಿಗೆ ಸಮೀಕ್ಷೆಗೆ ಹೋಗದೇ ಮೂರನೇ ವ್ಯಕ್ತಿಗಳಿಂದ ಬೆಳೆ ಸಮೀಕ್ಷೆ ಮಾಡಿಸಿದ್ದು ತೋಟಗಾರಿಕೆ ಬೆಳೆ ಬೆಳೆದವರಿಗೆ ಕೃಷಿ ಇಲಾಖೆ ಬೆಳೆಗಳನ್ನು ಹಾಗೂ ಕೃಷಿ ಇಲಾಖೆ ಬೆಳೆ ಬೆಳೆದವರಿಗೆ ತೋಟಗಾರಿಕೆ ಬೆಳೆಗಳನ್ನು ನಮೂದಿಸಿದ್ದು ಇದರಿಂದ ರೈತರಿಗೆ ಭಾರಿ ಅನ್ಯಾಯವಾಗಿದ್ದು ಮರು ಸಮೀಕ್ಷೆ ನಡೆಸಿ ರೈತರಿಗೆ ಶೀಘ್ರದಲ್ಲಿ ಎನ್‌ಡಿಆರ್‌ಎಪ್ ಕಾಯ್ದೆಯಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರೈತರು ತಮ್ಮ ವಿವಿಧ ಬೆಳೆಗಳಿಗೆ ಪ್ರಕೃತಿ ವಿಕೋಪದಿಂದ ಹಾನಿಯಾದ ಸಂದರ್ಭದಲ್ಲಿ ಹಣಕಾಸು ನೆರವು ಸಿಗುವ ವಿಶ್ವಾಸದಿಂದ ವಿಮಾ ಕಂಪನಿಯಲ್ಲಿ ವಿಮಾ ಮೊತ್ತವನ್ನು ಪ್ರತಿವರ್ಷ ಕಟ್ಟುತ್ತಿದ್ದು ಆದರೆ ಆ ಕಂಪನಿಯ ನೌಕರರು ತೊಂದರೆ ಅನುಭವಿಸಿದ ನಿಜವಾದ ರೈತರಿಗೆ ಕ್ಲೇಮ್ ನೀಡುವುದನ್ನು ಬಿಟ್ಟು ಯಾವುದೇ ತೊಂದರೆ ಅನುಭವಿಸಿದ ರೈತರ ಜೊತೆ ಶಾಮಿಲಾಗಿ ಅವರ ವಿಮಾ ಮೊತ್ತವನ್ನು ಕಂಪನೀಯ ನೌಕರರೇ ಭರಿಸಿ ಸರ್ಕಾರಕ್ಕೆ ಹಾಗೂ ತೊಂದರೆ ಸಿಲುಕಿದ ರೈತರಿಗೆ ಮೋಸ ಮಾಡುತ್ತಿದ್ದು, ರೈತರು ತಮಗೆ ಆಗಿರುವ ತೊಂದರೆ ಬಗ್ಗೆ ವಿಮಾ ಕಂಪನಿಯವರಿಗೆ ಹೇಳಿದರೆ ವಿನಾಕಾರಣ ನೀಡಿ ಅನ್ಯಾಯ ಮಾಡುತ್ತಿದ್ದು ಹಲವಾರು ವರ್ಷಗಳಿಂದ ನಡೆದು ಬಂದಿದ್ದು ತಕ್ಷಣ ಸರ್ಕಾರ ಸಿಒಡಿ ಇಲ್ಲವೇ ಸಿಬಿಐ ತನಿಖೆಗೊಳಪಡಿಸಬೇಕು ಎಂದರು.

ಎಲ್ಲ ಪ್ರಮಖ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು, ಇಲ್ಲದಿದ್ದಲ್ಲಿ ಭಾರತೀಯ ಕಿಸಾನ ಸಂಘದ ನೇತೃತ್ವದಲ್ಲಿ ರೈತರು 3, 4 ದಿನಗಳ ನಂತರ ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ, ಧರಣಿ, ಉಪವಾಸ ಸತ್ಯಾಗ್ರಹದಂತಹ ಚಳವಳಿ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಉ.ಪ್ರಾ. ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ ಯಡಹಳ್ಳಿ, ಕ.ರಾ. ರೈತ ಸಂಘದ ಬೀಳಗಿ ತಾಲೂಕು ಅಧ್ಯಕ್ಷ ಶಿವನಗೌಡ ಪಾಟೀಲ, ಶ್ರೀಶೈಲ ಮೇಟಿ, ರೈತ ಮುಖಂಡರಾದ, ಬಸವರಾಜ ಯಂಕಚಿ, ಚಂದ್ರಶೇಖರ ಹಡಪದ, ಅಜೀತ ನಾಯಕ, ಎಸ್.ಎಸ್.ಪಾಟೀಲ, ಕಿರಣ ಕುಲಕರ್ಣಿ, ಈರಣ್ಣ ಮಾಚಕನೂರ, ಶಂಕರ ದೇಸಾಯಿ, ಲಕ್ಷ್ಮಣ ಶಿರಬೂರ, ನೀಲೇಶ ಚಬ್ಬಿ, ಶ್ರೀಶೈಲ ಮೇಟಿ, ಮಂಜುನಾಥ ಹಾವರಗಿ ಸೇರಿದಂತೆ ಅನೇಕರು ಇದ್ದರು.