ನೋಟಾಕ್ಕೂ ಚಿನ್ಹೆ ನೀಡಿ: ಚುನಾವಣಾ ಆಯೋಗಕ್ಕೆ ನೋಟಿಸ್‌

| Published : Apr 04 2024, 01:01 AM IST

ನೋಟಾಕ್ಕೂ ಚಿನ್ಹೆ ನೀಡಿ: ಚುನಾವಣಾ ಆಯೋಗಕ್ಕೆ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನೋಟಾಕ್ಕೂ ಚಿಹ್ನೆ ಮಾಡಿ ಎಂದು ಚುನಾವಣಾ ಆಯೋಗಕ್ಕೆ ಇಲ್ಲಿನ ಕಳಸಾ-ಬಂಡೂರಿ ಹೋರಾಟಗಾರರು ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಚುನಾವಣೆಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಒಂದಿಲ್ಲೊಂದು ಚಿಹ್ನೆ ಇರುತ್ತದೆ. ಓದಲು ಬಾರದಿದ್ದರೂ ಆ ಚಿಹ್ನೆಗೆ ಮತ ಚಲಾಯಿಸಿ ಬರುತ್ತಾರೆ ಮತದಾರರು. ಅದೇ ರೀತಿ "ನೋಟಾ "ಕ್ಕೂ ಚಿಹ್ನೆ ಮಾಡಿ ಎಂದು ಚುನಾವಣಾ ಆಯೋಗಕ್ಕೆ ಇಲ್ಲಿನ ಕಳಸಾ-ಬಂಡೂರಿ ಹೋರಾಟಗಾರರು ಲೀಗಲ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಇದೀಗ ಇದು ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ.

ರೈತ ಬಂಡಾಯದ ನೆಲ ಎಂದೇ ಹೆಸರು ಪಡೆದಿರುವ ಗದಗ ಜಿಲ್ಲೆ ನರಗುಂದದಿಂದಲೇ ಈ ಹೋರಾಟ ಆರಂಭವಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕಳಸಾ-ಬಂಡೂರಿ ಹೋರಾಟ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳು ತಹಸೀಲ್ದಾರ್‌ ಹಾಗೂ ಜಿಲ್ಲಾಧಿಕಾರಿ ಮೂಲಕ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಜತೆಗೆ ಬಾರುಕೋಲು ಚಿಹ್ನೆಯಾಗಲಿ ಎಂದು ಒತ್ತಾಯಿಸಿದ್ದರು. ಆದರೆ ಅಲ್ಲಿಂದ ಯಾವುದೇ ಉತ್ತರ ಬಾರದಿರುವುದಕ್ಕೆ ಇದೀಗ ಸುಪ್ರೀಂ ಕೋರ್ಟ್‌ ವಕೀಲರ ಮೂಲಕ ನೋಟಿಸ್‌ ಕಳುಹಿಸಲಾಗಿದೆ.

ಯಾಕೆ ಬೇಕು ಚಿಹ್ನೆ?

ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗೂ ಯಾವುದಾದರೂ ಚಿಹ್ನೆಯನ್ನು ಆಯೋಗ ನೀಡುತ್ತದೆ. ಆ ಅಭ್ಯರ್ಥಿ ಇಂಥ ಚಿಹ್ನೆಗೆ ಮತಚಲಾಯಿಸಿ ಎಂದು ಪ್ರಚಾರ ಮಾಡುತ್ತಾನೆ. ಅನಕ್ಷರಸ್ಥರು, ಆತನ ಹೆಸರು ಓದಲು ಬಾರದಿದ್ದರೂ ಚಿಹ್ನೆ ನೋಡಿ ನೇರವಾಗಿ ಅದಕ್ಕೆ ಮತ ಚಲಾಯಿಸುತ್ತಾರೆ. ಕಣದಲ್ಲಿರುವವರು ಯಾರೊಬ್ಬರೂ ಮತದಾರನಿಗೆ ಸರಿಯೆನಿಸದಿದ್ದರೆ ಚಲಾಯಿಸುವ ಮತವೇ "ನೋಟಾ ". ಆದರೆ ಇದಕ್ಕೆ ಯಾವುದೇ ಚಿಹ್ನೆ ಇರುವುದಿಲ್ಲ. ಬದಲಿಗೆ ಎಲ್ಲರ ಹೆಸರು ಹಾಗೂ ಚಿಹ್ನೆ ಮುಗಿದ ಮೇಲೆ ನೋಟಾ (NOTA- None of the above) ಗುಂಡಿ ಇರುತ್ತದೆ. ಇದಕ್ಕೆ ಸರಿಯಾಗಿ ಪ್ರಚಾರ ಕೂಡ ಅಧಿಕಾರಿ ವರ್ಗ ಮಾಡುವುದಿಲ್ಲ. ಅದಕ್ಕೆ ಚಿಹ್ನೆ ಕೂಡ ಇರದ ಕಾರಣ ಅದನ್ನು ಸರಿಯಾಗಿ ಬಳಸಲು ಅನಕ್ಷರಸ್ಥರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಕಳೆದ 10 ವರ್ಷಕ್ಕೂ ಅಧಿಕ ಕಾಲದಿಂದ ನೋಟಾ ಮತ ಚಲಾಯಿಸಲು ಅವಕಾಶವಿದ್ದರೂ ಮತ ಬೀಳುತ್ತಿಲ್ಲ.

ಇದರ ಬದಲಿಗೆ ನೋಟಾಕ್ಕೂ ಚಿಹ್ನೆ ಇದ್ದರೆ, ಅದರ ಬಗ್ಗೆ ಪ್ರಚಾರ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಹಳ್ಳಿಗರು ಸೇರಿದಂತೆ ಎಲ್ಲರೂ ಚಿಹ್ನೆ ನೋಡಿ ನೇರವಾಗಿ ಮತಚಲಾಯಿಸಬಹುದು. ಈ ನಿಟ್ಟಿನಲ್ಲಿ "ಬಾರುಕೋಲು " ಚಿಹ್ನೆಯನ್ನು ಇವಿಎಂ ಮಷಿನ್‌ನಲ್ಲಿ ನೋಟಾದ ಚಿಹ್ನೆಯನ್ನಾಗಿ ಮಾಡಬೇಕು.

ಬಾರುಕೋಲು ಎಂದರೆ ಏಟು ಕೊಡುವ ಸಂಕೇತ. ಇಲ್ಲಿನ ಅಭ್ಯರ್ಥಿಗಳು ಯಾರೂ ಸರಿಯಿಲ್ಲ ಎಂಬುದಕ್ಕೆ ಬಾರುಕೋಲು ಚಿಹ್ನೆಗೆ ಮತ ನೀಡುವ ಮೂಲಕ ಅವರಿಗೆ ಏಟು ಕೊಟ್ಟಂತಾಗುತ್ತದೆ. ಆದಕಾರಣ ಬಾರುಕೋಲನ್ನೇ ಚಿಹ್ನೆಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಹೋರಾಟಗಾರರದ್ದು.

ಯಾರು ಕೊಟ್ಟಿದ್ದು?

ಮೊಟ್ಟ ಮೊದಲ ಬಾರಿಗೆ ಕಳಸಾ-ಬಂಡೂರಿ ಹೋರಾಟ ಸಮಿತಿಯನ್ನು ಹುಟ್ಟು ಹಾಕಿ ಹೋರಾಟ ಆರಂಭಿಸಿರುವ ವಿಜಯ ಕುಲಕರ್ಣಿ ಅವರೇ ಮನವಿ ಕೊಟ್ಟಿದ್ದರು. ಇದೀಗ ಸುಪ್ರೀಂಕೋರ್ಟ್‌ನ ವಕೀಲ ಗುರುದತ್ತ ಅಂಕೋಲೆಕರ್‌ ಮೂಲಕ ಆಯೋಗಕ್ಕೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ. ಇದೇ ಲೋಕಸಭೆ ಚುನಾವಣೆಯಲ್ಲೇ ನೋಟಾಕ್ಕೆ ಚಿಹ್ನೆ ಅಳವಡಿಸುವ ಕೆಲಸವಾಗಬೇಕು ಎಂಬ ಬೇಡಿಕೆ ಕುಲಕರ್ಣಿ ಅವರದ್ದು. ಅದಕ್ಕಾಗಿ ನೋಟಿಸ್‌ ಜಾರಿ ಮಾಡಿದ್ದೇವೆ. ಒಂದು ವೇಳೆ ಮಾಡದಿದ್ದರೆ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿರುವುದರ ಹಿನ್ನೆಲೆಯಿಂದ "ನೋಟಾ " ಇದೀಗ ಹೆಚ್ಚು ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.

ನೋಟಾ ಬಂದಿದ್ದು ಯಾವಾಗಿಂದ?

2013ರಲ್ಲಿ ಚುನಾವಣಾ ಅಭ್ಯರ್ಥಿಗಳಲ್ಲಿ ಯಾರೊಬ್ಬರಿಗೂ ಮತ ಹಾಕಲು ಇಷ್ಟ ಇಲ್ಲದೆ ಇದ್ದಾಗ ಪ್ರತ್ಯೇಕ ವ್ಯವಸ್ಥೆ ಮಾಡಲು ಪೀಪಲ್ಸ್ ಯುನಿಯನ್ ಸಿವಿಲ್ ಲಿಬರಟೀಸ್ (ಪಿಯುಸಿಎಲ್) ಎನ್ನುವ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿತ್ತು. ಸಂಸ್ಥೆ ವಾದ ಆಲಿಸಿದ ಸುಪ್ರೀಂಕೋರ್ಟ್, 2013ರಲ್ಲಿ ಮತಯಂತ್ರಗಳಲ್ಲಿ ನೋಟಾ- ಮೇಲಿನವರು ಯಾರೂ ಅಲ್ಲ ಎಂಬ ಹೆಚ್ಚುವರಿ ಬಟನ್ ಅಳವಡಿಸುವಂತೆ ಆದೇಶಿಸಿತ್ತು. ಇದೀಗ ರೈತ ಹೋರಾಟಗಾರರು ಈ ಚಿಹ್ನೆಯನ್ನು ಬದಲಾಯಿಸಲು ಕಾನೂನು ಹೋರಾಟ ನಡೆಸಿದ್ದಾರೆ.ನೋಟಾ ಬಟನ್‌ಗೆ ಚಿಹ್ನೆ ಬಳಸದೆ ಇಂಗ್ಲಿಷ್‌ ಅಕ್ಷರದಲ್ಲಿ ನೋಟಾ ಎಂದು ಬರೆಯಲಾಗಿದೆ. ಆದರೆ, ಚುನಾವಣೆ ಅಭ್ಯರ್ಥಿಗಳಿಗೆ ಚಿಹ್ನೆ ಇದ್ದಂತೆ ತಿರಸ್ಕರಿಸುವ ಚಿಹ್ನೆ ಇಲ್ಲ. ಅದು ಅನಕ್ಷರಸ್ಥ ಮತದಾರರಿಗೆ ಗೊತ್ತಾಗುವುದಿಲ್ಲ. ಇದರಿಂದ ನೋಟಾದ ಮೂಲ ಉದ್ದೇಶ ಈಡೇರುವುದಿಲ್ಲ. ಅದಕ್ಕಾಗಿ ನೋಟಾಕ್ಕೆ ಬಾರುಕೋಲು ಚಿಹ್ನೆ ಅಳವಡಿಸಿ ನೋಟಾ ಮಹತ್ವ ಎತ್ತಿ ಹಿಡಿಯಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಸಂಸ್ಥಾಪಕ ವಿಜಯ ಕುಲಕರ್ಣಿ ಹೇಳಿದ್ದಾರೆ.