ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಘೋಷಣೆ ನೀಡಿ

| Published : Feb 09 2024, 01:52 AM IST

ಸಾರಾಂಶ

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ವಿಶೇಷ ಘೋಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಅವರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಚಾಮರಾಜನಗರ ಜಿಲ್ಲೆಗೆ ವಿಶೇಷ ಘೋಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಅವರು ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗೋಮಾಳವನ್ನು ಪ್ರಭಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ ಅಲ್ಲದೇ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದಾರೆ. ಗಣಿಗಾರಿಕೆ ಲಾರಿಗಳಿಂದ ರಸ್ತೆಗಳು ಹಾಳಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾಗಿದೆ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಠಕ್ಕೆ ಸಿಲುಕಿದ್ದಾರೆ ಆದ್ದರಿಂದ ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಘೋಷಣೆ ಮಾಡಬೇಕು ಎಂದರು.2023-24ನೇ ಸಾಲಿನ ಬೆಳೆ ವಿಮೆ ಹಣ ಬಂದಿಲ್ಲ, ಅಲ್ಲದೇ ಹವಾಮಾನ ಇಲಾಖೆ 4 ತಿಂಗಳು ಬರ ಇರುತ್ತದೆ ಎಂದು ತಿಳಿಸಿದ್ದಾರೆ. ಬರದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಗೋಶಾಲೆಯನ್ನು ಈ ತಿಂಗಳ ಕೊನೆ ವಾರದಲ್ಲಿಯೇ ಸರ್ಕಾರ ಪ್ರಾರಂಭಿಸಬೇಕು ಎಂದರು.ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆಗಳನ್ನು ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಹಿಂಪಡೆಯಲಿದೆ ಎಂದು ವಿಧಾನಸಭೆ ಚುನಾವಣೆಯ ವೇಳೆ ಭರವಸೆ ನೀಡಿತ್ತು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಹಿಂಪಡೆಯಬೇಕು ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಗೋಮಾಳ ಒತ್ತುವರಿಯಾಗಿರುವ ಬಗ್ಗೆ ನಾವೇ ಸರ್ವೆ ಮಾಡಿಸಿ ಮಾಹಿತಿ ನೀಡಿದರೂ ಕ್ರಮ ವಹಿಸುತ್ತಿಲ್ಲ. ಅಧಿಕ ಭಾರ ಹೊತ್ತ ಲಾರಿ ತಪಾಸಣೆ ಮಾಡುತ್ತಿಲ್ಲ. ರಾತ್ರಿ ವೇಳೆ ಗಣಿಗಾರಿಕೆ ನಡೆಸುವಂತಿಲ್ಲ ಎಂದು ಆದೇಶ ಇದ್ದರೂ ಜಿಲ್ಲಾಡಳಿತ ಮತ್ತು ಗಣಿಗಾರಿಕೆ ಇಲಾಖೆ ಕ್ರಮವಹಿಸುತ್ತಿಲ್ಲ. ಕರಿಕಲ್ಲು ಮಾಲೀಕರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ ಯಾವುದೇ ಅಕ್ರಮ ನಡೆದರೂ ಕೇಳುತ್ತಿಲ್ಲ ಎಂದು ಆರೋಪಿಸಿದರು.ಪ್ರಧಾನ ಕಾರ್ಯದರ್ಶಿ ಕುಮಾರ್ ಮೇಲಾಜಿಪುರ ಮಾತನಾಡಿ, ಕೃಷಿ ಪಂಪ್ ಸೆಟ್ ಗಳಲ್ಲಿ ಉಪಕರಣ ಕಳವಾಗುತ್ತಿದ್ದು, ಗ್ರಾಮಾಂತರ ಪೋಲಿಸ್ ಠಾಣೆಯು ವ್ಯಾಪ್ತಿಯಲ್ಲಿ ಪೋಲಿಸರು ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಶಿವಮೂರ್ತಿ, ಚಾಮರಾಜನಗರ ತಾಲೂಕು ಅಧ್ಯಕ್ಷ ಮೂರ್ತಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ವಿಷಕಂಠಯ್ಯ ಇದ್ದರು.