ಸಾರಾಂಶ
ಹಾವೇರಿ: ತಾಯಂದಿರು ಸರ್ಕಾರಿ ನೌಕರಿ ಎಂದು ಬೆನ್ನುಹತ್ತದೆ ಅನ್ನ ನೀಡುವ ರೈತರ ಮಕ್ಕಳಿಗೆ ಕನ್ಯೆ ಕೊಡುವ ಮನಸ್ಸು ಮಾಡಬೇಕು. ಆಗ ರೈತರ ಮಕ್ಕಳ ಬದುಕು ಹಸನಾಗುತ್ತದೆ ಎಂದು ರಾಂಪುರ ಹಾಲಸ್ವಾಮಿಮಠದ ಶಿವಯೋಗಿ ಶಿವಕುಮಾರ ಸ್ವಾಮೀಜಿ ತಿಳಿಸಿದರು.ಬುಧವಾರ ತಾಲೂಕಿನ ಸುಕ್ಷೇತ್ರ ಹನುಮನಹಳ್ಳಿ ಹಾಲಸ್ವಾಮಿ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಗೋಪುರದ ಉದ್ಘಾಟನೆ, ಕಳಸಾರೋಹಣ, ಸಾಮೂಹಿಕ ವಿವಾಹ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ ಎಂಬ ಸಮಸ್ಯೆ ಜಗಜ್ಜಾಹೀರಾಗುತ್ತಿದೆ. ಎಲ್ಲ ತಾಯಂದಿರು ಮದುವೆ ವಿಚಾರ ಬಂದಾಗ ವರ ಸರ್ಕಾರಿ ನೌಕರಿ ಮಾಡಬೇಕು, ಅಂದರೆ ನಮ್ಮ ಮಗಳು ಚೆನ್ನಾಗಿರುತ್ತಾಳೆ ಎಂಬ ಮನೋಭಾವನೆ ಹೊಂದಿರುತ್ತಾರೆ. ಲಕ್ಷಾಂತರ ರು. ಖರ್ಚು ಮಾಡಿ ಆಡಂಬರದ ಮದುವೆ ಮಾಡುತ್ತಾರೆ. ನಂತರದ ದಿನಗಳಲ್ಲಿ ಅಂತಹವರಲ್ಲಿಯೇ ನೂರೆಂಟು ಸಮಸ್ಯೆಗಳು ಬಂದು ವಿಚ್ಛೇದನ ಪಡೆಯುವ ಹಂತಕ್ಕೆ ಬಂದು ತಲುಪುತ್ತವೆ. ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ಯೋಚಿಸಿ ರೈತರ ಮಕ್ಕಳಿಗೆ ಮಗಳನ್ನು ಕೊಟ್ಟು ಕನ್ಯಾದಾನ ಮಾಡಿದರೆ ರೈತರ ಮಕ್ಕಳು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ಜತೆಗೆ ಸನಾತನ ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದರು.ದಿಂಡದಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೊಸ ವರ್ಷದಲ್ಲಿ ಹೊಸ ಗೋಪುರ ನಿರ್ಮಾಣವಾಗಿದೆ. ಗುರುಗಳ ಸಂಕಲ್ಪ ಈಡೇರಿಸುವ ಶಕ್ತಿ ಶ್ರೀ ಮಠದ ಭಕ್ತರಲ್ಲಿದೆ. ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಕುರವತ್ತಿಯ ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿಯ ಅಭಿನವ ಹಾಲಶಿವಯೋಗಿಗಳು, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೂತನ ವಧುವರರನ್ನು ಆಶೀರ್ವದಿಸಿದರು. ಶ್ರೀಮಠದ ಸಿದ್ಧರಾಮ ಹಾಲಸ್ವಾಮೀಜಿ, ಹಾಲಮುದುಕೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು. ನೂತನ ಕಳಸಾರೋಹಣ: ಹಾಲಸ್ವಾಮಿ ಮಠದ ನೂತನ ಗೋಪುರದ ಕಳಶವನ್ನು ಹನುಮನಹಳ್ಳಿ ಗ್ರಾಮದ ಮುತ್ತೈಯರಿಂದ ಕುಂಭ ಮೆರವಣಿಗೆ, ಶಿವಕುಮಾರ ಹಾಲಸ್ವಾಮೀಜಿಯವರ ಪಲ್ಲಕ್ಕಿ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು. ಕಾರ್ಕಳದ ಚಂಡೆ ವಾದ್ಯ ಕಲಾತಂಡದವರು ಸಾಥ್ ನೀಡಿದ್ದರು. ಬಳಿಕ ಶ್ರೀಮಠದ ಪುರೋಹಿತ ವರ್ಗದರಿಂದ ಮಂತ್ರೋಪಚಾರ, ಅಭಿನವ ಹಾಲಶ್ರೀಗಳು ಹಾಗೂ ನಾಡಿನ ವಿವಿಧ ಮಠಾಧೀಶರಿಂದ ಕ್ರೇನ್ ಮೂಲಕ ನೂತನ ಕಳಸಾರೋಹಣವನ್ನು ನೆರವೇರಿಸಲಾಯಿತು.