ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಜನ-ಜಾನುವಾರು ಪ್ರಾಣಹಾನಿ, ಮನೆ, ಕೊಟ್ಟಿಗೆ, ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಜಾಗರೂಕತೆ ವಹಿಸಿ ನಿಖರವಾದ ವರದಿ ನೀಡುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಮಳೆಯಿಂದ ಹಾನಿಯಾಗಿರುವುದನ್ನು ದುರಸ್ತಿ ಮಾಡಲು ಮಾತ್ರ ಅವಕಾಶವಿದೆ. ಆದರೆ ಮರು ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ನಿಯಾಮಾನುಸಾರ ೬ ತಿಂಗಳ ಒಳಗೆ ಕೆಲಸ ಪೂರ್ಣಗೊಳಿಸಿ ಬಿಲ್ ನೀಡಿದರೆ ಹಣ ಬಿಡುಗಡೆ ಮಾಡಲಾಗುವುದು. ನಂತರ ಬಿಲ್ ನೀಡಿದರೆ ಪಾವತಿಗೆ ಅವಕಾಶ ಇರುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರ ವಹಿಸಿ ನಿಗದಿತ ಸಮಯದೊಳಗೆ ಬಿಲ್ ಸಲ್ಲಿಸುವಂತೆ ತಿಳಿಸಿದರು.
ಕೆಲಸ ಪ್ರಾರಂಭ ಮಾಡುವ ಮುನ್ನ ಮತ್ತು ನಂತರದ ಜಿ.ಪಿ.ಎಸ್. ಫೋಟೋ ನೀಡಬೇಕು. ಜೊತೆಗೆ ತಹಸೀಲ್ದಾರ್ ದೃಢೀಕರಣ ನೀಡುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.ಮಳೆಯಿಂದ ಹಾನಿಯಾಗಿರುವ ಮನೆಗಳ ಮಾಹಿತಿಯನ್ನು ಆರ್.ಜಿ.ಎಚ್.ಸಿ.ಎಲ್. ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅತಿ ಸಣ್ಣ ಪ್ರಮಾಣದ ಹಾನಿಯಾಗಿದ್ದರೆ ೬೫೦೦ ಪರಿಹಾರ, ಮಧ್ಯಮ ಪ್ರಮಾಣದ ಹಾನಿಯಾಗಿದ್ದರೆ ೨೫,೦೦೦ ಪರಿಹಾರ ಹಾಗೂ ಶೇ.೫೦ರಿಂದ ೭೦ರಷ್ಟು ಹಾನಿಯಾಗಿದ್ದರೆ ೫೦,೦೦೦ ಪರಿಹಾರ, ಸಂಪೂರ್ಣ ಮನೆ ಹಾನಿಯಾಗಿರುವ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಹಾನಿಯಾಗಿರುವ ಕಾಫಿ ಬೆಳೆ ಕುರಿತು ವರದಿ ನೀಡುವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಮಳೆಯಿಂದ ಹಾನಿಯಾಗಿರುವ ಕುರಿತು ಮೊದಲ ಹಂತದಲ್ಲಿ ವರದಿ ನೀಡುವಂತೆ ತಿಳಿಸಿದರು. ಮಳೆಯಿಂದ ಹಾನಿಯಾಗಿರುವ ರಸ್ತೆಗಳು, ಶಾಲಾ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದುರಸ್ತಿ ಮಾಡುವ ಮುನ್ನ ಮತ್ತು ನಂತರದ ಜಿ.ಪಿ.ಎಸ್ ಫೋಟೋಗಳನ್ನು ಬಿಲ್‌ನೊಂದಿಗೆ ನೀಡುವಂತೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಅವರು ಮಾತನಾಡಿ, ಪ್ರಸ್ತುತ ಮಳೆಯಿಂದ ಹಾನಿಯಾಗಿರುವ ಬಗ್ಗೆ ಮಾತ್ರ ಮಾಹಿತಿ ನೀಡುವಂತೆ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ.ಜಗದೀಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.