ಸಮರ್ಪಕ ಕುಡಿಯುವ ನೀರು ಕೊಡಿ

| Published : May 07 2025, 12:45 AM IST

ಸಾರಾಂಶ

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮಗಳನ್ನು ಪಿಡಿಒಗಳು ಕೈಗೊಂಡು ಸಕಾಲಕ್ಕೆ ನೀರು ಪೂರೈಸಬೇಕು. ನೀರು ವ್ಯರ್ಥವಾಗಿ ಹರಿಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ಗ್ರಾಪಂ ಮೇಲಿದೆ. ಪ್ರತಿಯೊಬ್ಬ ಪಿಡಿಒಗಳು ಕೇಂದ್ರ ಸ್ಥಳದಲ್ಲಿ ಇದ್ದು ಮುಂಜಾಗ್ರತೆ ಅಗತ್ಯ ಕ್ರಮಕೈಗೊಳ್ಳಬೇಕು.

ಕೊಪ್ಪಳ(ಯಲಬುರ್ಗಾ)

ಕುಕನೂರು ಮತ್ತು ಯಲಬರ್ಗಾ ಅವಳಿ ತಾಲೂಕಿನ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಇದರಲ್ಲಿ ಲೋಪ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿದರು.

ಯಲಬುರ್ಗಾ ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಕುಕನೂರು, ಯಲಬುರ್ಗಾ ಅವಳಿ ತಾಲೂಕು ಪಂಚಾಯಿತಿ ವತಿಯಿಂದ ಜರುಗಿದ ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮಗಳನ್ನು ಪಿಡಿಒಗಳು ಕೈಗೊಂಡು ಸಕಾಲಕ್ಕೆ ನೀರು ಪೂರೈಸಬೇಕು. ನೀರು ವ್ಯರ್ಥವಾಗಿ ಹರಿಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ಗ್ರಾಪಂ ಮೇಲಿದೆ. ಪ್ರತಿಯೊಬ್ಬ ಪಿಡಿಒಗಳು ಕೇಂದ್ರ ಸ್ಥಳದಲ್ಲಿ ಇದ್ದು ಮುಂಜಾಗ್ರತೆ ಅಗತ್ಯ ಕ್ರಮಕೈಗೊಳ್ಳಬೇಕು. ಜೆಜೆಎಂ ಸಂಪರ್ಕಿತ ನಲ್ಲಿಗಳನ್ನು ಗ್ರಾಪಂಗಳಿಗೆ ವಹಿಸಬೇಕು. ಅವುಗಳನ್ನು ಪಿಡಿಒ ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕು. ಈ ಕುರಿತು ಮುಂದಿನ ತಿಂಗಳು ಮತ್ತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.

ನೀರು ಮತ್ತು ನೈರ್ಮಲ್ಯಕ್ಕೆ ಗ್ರಾಪಂನಲ್ಲಿಯೇ ಲಭ್ಯವಿರುವ ಅನುದಾನ ಬಳಸಿಕೊಳ್ಳಿ. ಗ್ರಾಮಗಳ ಅಭಿವೃದ್ಧಿಗೆ ಪಿಡಿಒಗಳು ಮುಂದಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಮಸ್ಯಾತ್ಮಕ ಗ್ರಾಮಗಳತ್ತ ಹೆಚ್ಚು ಗಮನ ಹರಿಸಿಬೇಕು ಎಂದರು. ಡಿಬಿಒಟಿ ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಕುಡಿಯುವ ನೀರು ಸರಬರಾಜು ಆಗುತ್ತಿರುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳಿಂದ ಸಂಪೂರ್ಣವಾಗಿ ಮಾಹಿತಿ ಪಡೆದರು.

ತಾಪಂ ಇಒ ಸಂತೋಷ ಪಾಟೀಲ್, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಿಡಿಒಗಳು ಇದ್ದರು.