ಸಾರಾಂಶ
ಗಜೇಂದ್ರಗಡ: ನಾವೆಲ್ಲರೂ ಒಂದು ಎನ್ನುವಂತೆ ಬಾಳುತ್ತಿರುವ ದೇಶದಲ್ಲಿ ಕಳೆದ ೧೦ವರ್ಷಗಳಿಂದ ಬಿಜೆಪಿಗರು ಅದರಲ್ಲೂ ಪ್ರಧಾನಿ ಮೋದಿ ಮುಸಲ್ಮಾನರು ಎಂದರೆ ಪಾಕಿಸ್ತಾನ ಎನ್ನುವ ಲೆಕ್ಕವನ್ನು ಜನರಲ್ಲಿ ಬಿತ್ತುವ ಮೂಲಕ ಒಡೆದಾಳುವ ನೀತಿಗೆ ಮುಂದಾಗಿದ್ದು, ಅವರಿಗೆ ತಕ್ಕ ಉತ್ತರ ನೀಡಬೇಕಿದೆ ಎಂದು ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಕುಷ್ಟಗಿ ರಸ್ತೆಯಲ್ಲಿನ ಶಾದಿ ಮಹಲ್‌ನಲ್ಲಿ ಬುಧವಾರ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಮತಯಾಚಿಸಿ ಮಾತನಾಡಿದರು.ದೇಶದಲ್ಲಿ ಸಹೋದರರಂತೆ ಬಾಳುತ್ತಿರುವ ಜನರನ್ನು ಒಡೆದಾಳುವ ತಂತ್ರದ ಮೂಲ ಕಳೆದ ೧೦ ವರ್ಷಗಳಿಂದ ಅನುಸರಿಸುತ್ತಿರುವ ಕೇಂದ್ರ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾಚಿಸುವ ಬದಲು ಪ್ರಧಾನಿ ಮೋದಿ ಅವರು, ದೇಶದಲ್ಲಿ ಸಹೋದರತೆ ಹಾಗೂ ನಾವೆಲ್ಲರೂ ಒಂದು ಎನ್ನುವಂತೆ ಬದುಕು ನಡೆಸುತ್ತಿರುವ ಜನರನ್ನು ಒಡೆದಾಳುವ ನೀತಿಗೆ ಮುಂದಾಗಿದ್ದಾರೆ. ಪರಿಣಾಮ ದೇಶದ ಮುಸಲ್ಮಾನರು ಎಂದರೆ ಪಾಕಿಸ್ತಾನ ಎನ್ನುವ ಲೆಕ್ಕ ಜನರಲ್ಲಿ ಬಿತ್ತುವ ಹಂತಕ್ಕೆ ಬಂದಿದ್ದಾರೆ. ಹೀಗಾಗಿ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ನಾವೇಲ್ಲರೂ ಶ್ರಮಿಸಬೇಕಿದೆ ಎಂದ ಅವರು, ದೇಶದಲ್ಲಿ ಸಮಪಾಲು, ಸಮಬಾಳು ಎನ್ನುವ ತತ್ವದಡಿ ಕಳೆದ ೬೦ವರ್ಷಗಳಿಂದ ಆಡಳಿತ ನಡೆಸುತ್ತಾ ದೇಶವನ್ನು ಸುಭದ್ರವಾಗಿ ಕಟ್ಟುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವನ್ನು ನಾವು ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚಿಸಲು ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಗೆಲ್ಲಿಸಲು ಶ್ರಮಿಸೋಣ ಎಂದರು.
ವಕೀಲ ಎಂ.ಎಚ್. ಕೋಲಕಾರ, ಎ.ಡಿ. ಕೋಲಕಾರ, ಶಾಮೀದ್ ದಿಂಡವಾಡ, ದಾವಲ್ ತಾಳಿಕೋಟಿ ಹಾಗೂ ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ, ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ನಡೆದ ಘಟನೆಗಳನ್ನು ಬಾಂಧವರು ಗಮನದಲ್ಲಿಟ್ಟುಕೊಳ್ಳಬೇಕು. ಅಲ್ಲದೆ ದೇಶದ ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ಅದರಲ್ಲೂ ಕಳೆದ ಕೆಲ ದಿನಗಳಿಂದ ಮುಸ್ಲಿಂ ಸಮಾಜದ ಬಗ್ಗೆ ಮಾತನಾಡುತ್ತಿರುವ ದಾಟಿಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಹಿಂದಿನಿಂದಲೂ ಸಹ ದೇಶದಲ್ಲಿ ಎಲ್ಲರೊಂದಿಗೆ ನಾವು ಒಂದೇ ತಾಯಿಯ ಮಕ್ಕಳಂತೆ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ನಾವು ದೇಶದ ಮುಸ್ಲಿಂರು, ನಾವು ಸಹ ಭಾರತೀಯರು ಎನ್ನುವದನ್ನು ಪ್ರಧಾನಿ ಅವರು ಮರೆತಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನನಗೆ ಬೆಂಬಲ ನೀಡಿದಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಬೆಂಬಲ ನೀಡಬೇಕು. ನಾವು ವಿವಿಧತೆಯಲ್ಲಿ ಏಕತೆ ಕಾಣುವವರು. ಸಮಪಾಲು, ಸಮಬಾಳು ಕಾಂಗ್ರೆಸ್ ತತ್ವವಾಗಿದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರು.
ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಅಂಜಮನ್ ಇಸ್ಲಾಂ ಕಮಿಟಿ ಚೇರಮನ್ ಹಸನ ತಟಗಾರ, ಸಿದ್ದಪ್ಪ ಬಂಡಿ, ಎಚ್.ಎಸ್. ಸೋಂಪುರ, ವೀರಣ್ಣ ಶೆಟ್ಟರ್, ಪರಶುರಾಮ ಅಳಗವಾಡಿ, ಉಮೇಶ ರಾಠೋಡ, ಅಪ್ಪು ಮತ್ತಿಕಟ್ಟಿ, ಅರಿಹಂತ ಬಾಗಮಾರ, ಇಮ್ರಾನ ಅತ್ತಾರ, ಭಾಷಾ ಮುದಗಲ್, ಸಮದ್ ಕೋಲಕಾರ, ಮಹ್ಮದ ನಾಲಬಂದ, ಯೂಸುಫ್ ಇಟಗಿ, ಸಮೀರ ಅತ್ತಾರ ಸೇರಿ ಇತರರು ಇದ್ದರು.