ಸಾರಾಂಶ
ಎಂಎಲ್ಎ ಗಳಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ನೂರು- ಐನೂರು ಕೋಟಿ ಅನುದಾನ ನೀಡಲಾಗುತ್ತದೆ. ಅದೇ ನಮಗೆ (ಮೇಲ್ಮನೆ ಸದಸ್ಯರು) ಕೇವಲ ಎರಡು ಕೋಟಿ ಮಾತ್ರ ಕೊಡ್ತಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ನಾವೂ ಕೂಡಾ ಒಬ್ಬ ಅಭಿವೃದ್ಧಿ ಕಾರ್ಯ ಮಾಡುವವರು. ಆದರೆ, ಸೂಕ್ತ ಅನುದಾನ ಇಲ್ಲದಿದ್ದರೆ ಹೇಗೆ ಕೆಲಸ ಮಾಡುವುದು.... ವಿಧಾನಪರಿಷತ್ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ಧಿ ಅವರ ಅಸಹಾಯಕ ಮಾತುಗಳಿವು.
ಕನ್ನಡಪ್ರಭ ವಾರ್ತೆ ಧಾರವಾಡ
ಎಂಎಲ್ಎ ಗಳಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ನೂರು- ಐನೂರು ಕೋಟಿ ಅನುದಾನ ನೀಡಲಾಗುತ್ತದೆ. ಅದೇ ನಮಗೆ (ಮೇಲ್ಮನೆ ಸದಸ್ಯರು) ಕೇವಲ ಎರಡು ಕೋಟಿ ಮಾತ್ರ ಕೊಡ್ತಾರೆ. ಸಾರ್ವಜನಿಕರ ದೃಷ್ಟಿಯಲ್ಲಿ ನಾವೂ ಕೂಡಾ ಒಬ್ಬ ಅಭಿವೃದ್ಧಿ ಕಾರ್ಯ ಮಾಡುವವರು. ಆದರೆ, ಸೂಕ್ತ ಅನುದಾನ ಇಲ್ಲದಿದ್ದರೆ ಹೇಗೆ ಕೆಲಸ ಮಾಡುವುದು....ವಿಧಾನಪರಿಷತ್ ಬಿಜೆಪಿ ಸದಸ್ಯ ಶಾಂತಾರಾಮ್ ಸಿದ್ಧಿ ಅವರ ಅಸಹಾಯಕ ಮಾತುಗಳಿವು.
ಬುಧವಾರ ಸುದ್ದಿಗಾರರ ಎದುರು ತಮ್ಮ ಅಳಲು ತೋಡಿಕೊಂಡ ಅವರು, ರಾಜ್ಯದಲ್ಲಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ನನ್ನನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ, ಸರಿಯಾಗಿ ಅನುದಾನ ಇಲ್ಲದೇ ಹೇಗೆ ಕೆಲಸ ಮಾಡಲು ಸಾಧ್ಯ? ಈ ಹಿಂದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಸೂಕ್ತ ಅನುದಾನ ನೀಡುವಂತೆ ಮನವಿ ಸಹ ಮಾಡಿದ್ದೆ. ಈಗ ಸಿದ್ದರಾಮಯ್ಯ ಅವರಿಗೂ ಮನವಿ ಮಾಡುತ್ತಿದ್ದೇನೆ. ಇನ್ನಾದರೂ ಸೂಕ್ತ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.ನಾನು ವಿಧಾನಪರಿಷತ್ ಸದಸ್ಯನಾಗಿ ಮೂರು ವರ್ಷಗಳಾಗಿವೆ. ರಾಜಕೀಯ ಮಾಡುತ್ತಾ ಕಾಲೆಳೆಯುವವರಿಗೆ ತೂಕ ಜಾಸ್ತಿ ಇದೆ. ಕೆಲಸ ಮಾಡುವವರಿಗೆ ಸರ್ಕಾರಗಳು ಸೂಕ್ತ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.
ನಾವು ಸದನದಲ್ಲಿ ಚರ್ಚೆ ಮಾಡುತ್ತೇವೆ. ಬಹಳಷ್ಟು ಬೇಡಿಕೆ ಇಡುತ್ತೇವೆ. ಸರ್ಕಾರಕ್ಕೆ ಮನವಿ ಕೊಡುತ್ತೇವೆ. ನಮಗೆ ಬಿಲ್ ಪಾಸಾಗುವಾಗ ತೂಕ ಜಾಸ್ತಿ. ಆಮೇಲೆ ಯಾವುದೇ ಅನುದಾನ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿಗಳು ಬುಡಕಟ್ಟು ಜನಾಂಗಕ್ಕೆ ಕೆಲಸ ಮಾಡಲು ಸೂಕ್ತ ಅನುದಾನ ನೀಡಲಿ ಎಂದು ಆಗ್ರಹಿಸಿದರು.