ಕಾಳು ಕಟ್ಟುತ್ತಿರುವ ಭತ್ತದ ಬೆಳೆಗಳಿಗೆ ನೀರು ಹರಿಸಿ

| Published : Nov 23 2023, 01:45 AM IST

ಕಾಳು ಕಟ್ಟುತ್ತಿರುವ ಭತ್ತದ ಬೆಳೆಗಳಿಗೆ ನೀರು ಹರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನವೆಂಬರ್ ತಿಂಗಳಾಂತ್ಯದವರೆಗೂ ಭದ್ರಾ ನೀರು ನೀಡಿ । ಬಿಜೆಪಿ ರೈತ ಮೋರ್ಚಾದಿಂದ ಸರ್ಕಾರಕ್ಕೆ ಮನವಿ

ನವೆಂಬರ್ ತಿಂಗಳಾಂತ್ಯದವರೆಗೂ ಭದ್ರಾ ನೀರು ನೀಡಿ । ಬಿಜೆಪಿ ರೈತ ಮೋರ್ಚಾದಿಂದ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯ ಸುಮಾರು 1.4 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಪೈಕಿ ಕಾಳು ಕಟ್ಟುವ ಹಂತದಲ್ಲಿರುವ ಭತ್ತಕ್ಕೆ ನೀರು ಹರಿಸಲು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ಗೆ ಮನವಿ ಅರ್ಪಿಸಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ಎಂ.ಸತೀಶ ಕೊಳೇನಹಳ್ಳಿ, ಮುಖಂಡರಾದ ಆಲೂರು ನಿಂಗರಾಜ, ಅಣಜಿ ಗುಡ್ಡೇಶ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ, ಕೆ.ಎಸ್‌.ಮೋಹನ್‌, ಕೊಂಡಜ್ಜಿ ಪರಮೇಶ್ವರಪ್ಪ ಮುದೇಗೌಡ್ರು ಇತರರು ತಕ್ಷಣ ನಾಲೆಗೆ ನೀರು ಹರಿಸಲು ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ, ಜಿಲ್ಲೆಯಲ್ಲಿನ ಭತ್ತದ ಶೇ.20ರಷ್ಟು ಪೈಕಿ ಕೊಯ್ಲಿಗೆ ಬಂದಿದ್ದು, ಉಳಿದ ಶೇ.50 ಭತ್ತದ ಬೆಳೆ ಇನ್ನು 8-10 ದಿನದಲ್ಲೇ ಕಟಾವಿಗೆ ಬರಲಿದೆ. ಉಳಿದ ಶೇ.30ರಷ್ಟು ಭತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿದೆ. ಈ ಬೆಳೆಯು ನವೆಂಬರ್ ಅಂತ್ಯಕ್ಕೆ ಕೊಯ್ಲಿಗೆ ಬರಲಿದೆ. ಬೆಳೆ ಕಾಳು ಕಟ್ಟುವ ಹಂತದಲ್ಲಿರುವುದರಿಂದ ನೀರೊದಗಿಸದಿದ್ದರೆ ಕಾಳು ಸಂಪೂರ್ಣ ಜೊಳ್ಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ನವೆಂಬರ್ ತಿಂಗಳಾಂತ್ಯದವರೆಗೂ ಭದ್ರಾ ನೀರು ಹರಿಸಬೇಕು. ಈಗಾಗಲೇ ಭತ್ತದ ಪೈರು ಕೊಯ್ಲಿಗೆ ಬಂದಿರುವುದು ಬಿಟ್ಟು, ಕಾಳು ಕಟ್ಟುವ ಹಂತದಲ್ಲಿರುವ ಪೈರಿಗೆ ಮಾತ್ರ ನೀರೊದಗಿಸುವ ಕಾರ್ಯ ಆಗಬೇಕು. ಈಗಾಗಲೇ ಕೊಯ್ಲಿಗೆ ಬಂದ ಭಾಗಕ್ಕೂ ನೀರು ನಿರಂತರ ಹರಿಸಲಾಗುತ್ತಿದೆ. ಇದರಿಂದ ನೀರು ವ್ಯರ್ಥವಾಗಿ ಹರಿದು, ಪೋಲಾಗುತ್ತಿದೆ. ನ.22ರ ರಾತ್ರಿಯಿಂದಲೇ ಭದ್ರಾ ಡ್ಯಾಂನಿಂದ ನೀರು ನಿಲುಗಡೆ ಮಾಡುವುದಾಗಿ ಭದ್ರಾ ನೀರಾವರಿ ಸಲಹಾ ಸಮಿತಿ ಕಾರ್ಯದರ್ಶಿ ಸುಜಾತಾ ತಿಳಿಸಿದ್ದಾರೆ. ಒಂದು ವೇಳೆ ಇಂದಿನಿಂದಲೇ ನೀರು ನಿಲುಗಡೆ ಮಾಡಿದರೆ, ಕಾಳು ಕಟ್ಟುವ ಹಂತದಲ್ಲಿರುವ ಶೇ.30 ಬೆಳೆ ಹಾನಿಯಾಗುತ್ತದೆ ಎಂದು ಹೇಳಿದರು.

ಸಚಿವರ ಜೊತೆ ಚರ್ಚಿಸುವ ಭರವಸೆ:

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಇನ್ನು 2 ದಿನ ನೀರು ಹರಿಸುವಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಅವಶ್ಯಕತೆ ಬಿದ್ದರೆ ಐಸಿಸಿ ಅಧ್ಯಕ್ಷರಾದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜೊತೆ ಚರ್ಚಿಸುವ ಭರವಸೆ ನೀಡಿದರು. ಶೇ.30ರಷ್ಟು ಬೆಳೆಗಳಿಗೆ ನೀರು ಹರಿಸಿ

ಭದ್ರಾ ನಾಲೆಯಲ್ಲಿ ಇಂದಿನಿಂದ ನೀರು ನಿಲುಗಡೆ ಮಾಡದೇ, ನವೆಂಬರ್ ತಿಂಗಳ ಪೂರ್ತಿ ಬತ್ತದ ಬೆಳೆ ಕಾಳು ಕಟ್ಟುವ ಹಂತದಲ್ಲಿರುವ ಶೇ.30ರಷ್ಟು ಬೆಳೆಗಳಿಗೆ ಮಾತ್ರ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ರಾಜ್ಯ ಸರ್ಕಾರವು ನೀರಾವರಿ ನಿಗಮದ ಅಧಿಕಾರಿಗಳಿಗೆ ತಕ್ಷಣವೇ ಆದೇಶ ಹೊರಡಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿ, ಭದ್ರಾ ಅಚ್ಚುಕಟ್ಟಿನಲ್ಲಿ ಶೇ.30 ಭಾಗಕ್ಕೆ ಮಾಸಾಂತ್ಯದವರೆಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಆಗ್ರಹಿಸಿದೆ.