ರಸಾಯನಶಾಸ್ತ್ರ ಶಿಕ್ಷಕ ರೂಪೇಶ್ ಪುತ್ತೂರ್ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಕನ್ನಡಪ್ರಭ ವಾರ್ತೆ ತುಮಕೂರು
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಹಾಗಾಗಿ ಕನ್ನಡ ಭಾಷೆಯನ್ನು ಕೀಳಾಗಿ ಕಾಣುವ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಕನ್ನಡ ಶಾಲೆಗಳನ್ನು ಮುಚ್ಚದೆ, ಅವುಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಪ್ರತಿ ತರಗತಿಗೆ ಒಬ್ಬರಂತೆ ಶಿಕ್ಷಕರ ನೇಮಕ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ರಸಾಯನಶಾಸ್ತ್ರ ಶಿಕ್ಷಕರೊಬ್ಬರು ಬೀದರ್‌ನಿಂದ ಬೆಂಗಳೂರಿಗೆ ಏಕಾಂಗಿ ಪಾದಯಾತ್ರೆ ಕೈಗೊಂಡಿದ್ದು, ತುಮಕೂರಿಗೆ ಆಗಮಿಸಿದ್ದರು.ರೂಪೇಶ್ ಪುತ್ತೂರು ಜುಲೈ11ರಿಂದ ಪಾದೆಯಾತ್ರೆ ಕೈಗೊಂಡಿದ್ದು, ಬುಧವಾರ ಬೆಳಗ್ಗೆ 11 ಗಂಟೆಗೆ ತುಮಕೂರು ನಗರಕ್ಕೆ ಆಗಮಿಸಿದರು. ಈ ವೇಳೆ ಅವರನ್ನು ನಗರಕ್ಕೆ ಬರಮಾಡಿಕೊಂಡ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮತ್ತು ತಂಡ, ಅವರನ್ನು ಸಿದ್ದಗಂಗಾ ಮಠಕ್ಕೆ ಕರೆದುಕೊಂಡು ಹೋಗಿ, ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಗದ್ದುಗೆ ಪೂಜೆ ಸಲ್ಲಿಸಿದ ನಂತರ ಅವರನ್ನು ಅಭಿನಂದಿಸಿ ಬೀಳ್ಕೋಟ್ಟರು.ಈ ವೇಳೆ ಮಾತನಾಡಿದ ಭಾಷಾ ಸೌಹಾರ್ದ ಪಾದಯಾತ್ರಿ ರೂಪೇಶ ಪುತ್ತೂರು, ಭಾರತ ಕರ್ನಾಟಕದಂತಹ ಹಲವಾರು ರಾಜ್ಯಗಳು ಸೇರಿದ ಒಕ್ಕೂಟ ವ್ಯವಸ್ಥೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ. ಭಾಷೆ ಆಧಾರದಲ್ಲಿ ರಾಜ್ಯಗಳು ವಿಂಗಡನೆಯಾದ ಮೇಲೆ ಒಂದು ಭಾಷೆಯನ್ನು ವೈಭವೀಕರಿಸಿ, ಉಳಿದ ಭಾಷೆ ಕೀಳಾಗಿ ಕಾಣುವುದು ದೇಶದ್ರೋಹಕ್ಕೆ ಸಮಾನ. ಭಾರತ ದೇಶಕ್ಕೆ ರಾಷ್ಟ್ರದ್ವಜ, ರಾಷ್ಟ್ರಗೀತೆ ಎಷ್ಟು ಮುಖ್ಯವೋ, ಅದೇ ರೀತಿ ಕರ್ನಾಟಕಕ್ಕೆ ಕನ್ನಡ ಭಾಷೆಯೂ ಆಷ್ಟೇ ಮುಖ್ಯ. ಹಾಗಾಗಿ ಕನ್ನಡ ಭಾಷೆ, ನೆಲ, ಜಲವನ್ನು ಕೀಳಾಗಿ ಕಾಣುವವರ ವಿರುದ್ಧ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಹೇಳಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಡಾ.ಧನಿಯಕುಮಾರ್ ಮಾತನಾಡಿ, ಖಾಸಗಿ ಶಾಲೆಗಳ ಆರ್ಭಟದಿಂದ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಏಕೋಪಾಧ್ಯಾಯ ಶಾಲೆಗಳ ಸ್ಥಿತಿ ಹೇಳ ತೀರದಾಗಿದೆ. ಶಾಲೆಯ ಕಸ ಹೊಡೆಯುವುದು, ಮಕ್ಕಳಿಗೆ ಹಾಲು, ಬಿಸಿಯೂಟ, ಬಾಳೆ ಹಣ್ಣು, ಮೊಟ್ಟೆ ಕೊಡುವುದು ಇದರಲ್ಲಿ ಸಮಯ ಮುಗಿದು ಪಾಠ ಮಾಡಲು ಸಮಯವೇ ಇಲ್ಲದಾಗಿದೆ. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರೂಪೇಶ್ ಪುತ್ತೂರು ಅವರಂತಹ ಶಿಕ್ಷಕರ ನಿಜವಾದ ಕಾಳಜಿಯನ್ನು ಅರ್ಥ ಮಾಡಿಕೊಂಡು ಕನ್ನಡ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.ಈ ವೇಳೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ವಿಠಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.