ಡಾ.ರಾಜ್‌ಕುಮಾರ್‌ಗೆ ಭಾರತರತ್ನ ನೀಡಿ: ಡಾ.ವೈ.ಡಿ. ರಾಜಣ್ಣ ಸಲಹೆ

| Published : Apr 24 2025, 11:45 PM IST

ಡಾ.ರಾಜ್‌ಕುಮಾರ್‌ಗೆ ಭಾರತರತ್ನ ನೀಡಿ: ಡಾ.ವೈ.ಡಿ. ರಾಜಣ್ಣ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾರಂಭದಲ್ಲಿ ಹಾಜರಿದ್ದವರು ಡಾ.ರಾಜ್‌ಕುಮಾರ್‌ ಅವರಿಗೆ ಭಾರತರತ್ನ ನೀಡಿ ಎನ್ನುವ ಭಿತ್ತಿಪತ್ರಗಳನ್ನು ಕೂಡ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳುವಂತೆ ಡಾ.ರಾಜ್‌ಕುಮಾರ್‌ ಕಲಾ ಸೇವಾ ಟ್ರಸ್ಟ್‌ ಗೌರವಾಧ್ಯಕ್ಷ ಡಾ.ವೈ.ಡಿ. ರಾಜಣ್ಣ ಆಗ್ರಹಿಸಿದರು.ಟ್ರಸ್ಟ್‌ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ರಾಜ್‌ಕುಮಾರ್‌ ಅವರ 97ನೇ ಜನ್ಮದಿನ ಹಾಗೂ ಕಲಾಪೋಷಕರಿರೆ ಡಾ.ರಾಜ್‌ ಕಲಾಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಕನ್ನಡಕ್ಕೆ ಡಾ.ರಾಜ್‌ಕುಮಾರ್‌ ಅವರ ಕೊಡುಗೆ ಅಪಾರವಾಗಿದೆ. ಅವರ ಬದುಕು ಮತ್ತು ವೃತ್ತಿ ಬೇರೆ ಬೇರೆಯಾಗಿರಲಿಲ್ಲ. ಇದು ಅವರು ಜನಮಾನಸದಲ್ಲಿ ಸದಾ ಉಳಿಯುವಂತೆ ಮಾಡಿದೆ. ಇಂತಹ ಮೇರುಕಲಾವಿದನಿಗೆ ಭಾರತರತ್ನ ಪ್ರಶಸ್ತಿ ನೀಡಲೇಬೇಕು ಎಂದರು.ಒಂದೇ ಭಾಷೆಯಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಟನಾಗಿ, ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ ಏಕೈಕ ನಟ ಡಾ.ರಾಜ್‌ಕುಮಾರ್. ಅವರಿಗೆ ಕರ್ನಾಟಕ ರತ್ನ, ಪದ್ಮಭೂಷಣ, ಕೆಂಟಕಿ ಕರ್ನಲ್‌ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ. ಇದರ ಜೊತೆಗೆ ಭಾರತರತ್ನ ಕೂಡ ಸೇರಬೇಕಿದೆ. ಈ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನಹರಿಸಬೇಕು ಎಂದರು.ಸಮಾರಂಭದಲ್ಲಿ ಹಾಜರಿದ್ದವರು ಡಾ.ರಾಜ್‌ಕುಮಾರ್‌ ಅವರಿಗೆ ಭಾರತರತ್ನ ನೀಡಿ ಎನ್ನುವ ಭಿತ್ತಿಪತ್ರಗಳನ್ನು ಕೂಡ ಪ್ರದರ್ಶಿಸಿದರು.ಇದೇ ಸಂದರ್ಭದಲ್ಲಿ ಕಲಾ ಪೋಷಕರಾದ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಕರ್ನಾಟಕ ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ, ಮೈಸೂರು ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯಕುಮಾರ್‌, ಮೈಸೂರು ಜಿಲ್ಲಾ ಕುಸ್ತಿ ಸಂಘದ ಅದ್ಯಕ್ಷ ಎನ್. ಚಂದ್ರಶೇಖರ್‌ ಅವರಿಗೆ ಡಾ.ರಾಜ್‌ ಕಲಾ ಸೇವಾರತ್ನ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಪ್ರದಾನ ಮಾಡಿದರು. ಮತ್ತೊರ್ವ ಪ್ರಶಸ್ತಿ ಪುರಸ್ಕೃತರಾದ ಮೂಡಾ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ಗೈರಾಗಿದ್ದರು.ಟ್ರಸ್ಟ್‌ ಅಧ್ಯಕ್ಷ ಮೈಸೂರು ಜಯರಾಂ ಸ್ವಾಗತಿಸಿದರು. ಸದಸ್ಯರಾದ ಸಿದ್ದರಾಜು, ಗಣೇಶ್‌ ಈಶ್ವರ ಭಟ್, ಭಾಸ್ಕರ್, ಸುರೇಶ್‌, ಶ್ರುತಿ, ಅನಿತಾ, ಲತಾ ಬಾಲಕೃಷ್ಣ ಮೊದಲಾದವರು ಇದ್ದರು.