ರಾಜ್ಯದ ಹಿಂದುಳಿದ ೧೪ ತಾಲೂಕುಗಳ ಪೈಕಿ ಮುಂಡಗೋಡ ಕೂಡ ಒಂದಾಗಿರುವುದು ವಿಷಾದನೀಯ ಸಂಗತಿ.

ಸಮಗ್ರ ಗ್ರಾಮ ಅಭಿವೃದ್ಧಿ ಯೋಜನೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಮುಂಡಗೋಡ

ರಾಜ್ಯದ ಹಿಂದುಳಿದ ೧೪ ತಾಲೂಕುಗಳ ಪೈಕಿ ಮುಂಡಗೋಡ ಕೂಡ ಒಂದಾಗಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಮಗ್ರ ಗ್ರಾಮ ಅಭಿವೃದ್ಧಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅರ್ಹ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ, ಸ್ವ ಸಹಾಯ ಸಂಘಗಳಿಗೆ ಸುತ್ತು ನಿಧಿ ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮುಂಡಗೋಡ ತಾಲೂಕು ಇಂದಿಗೂ ಕೂಡ ಹಿಂದುಳಿದಿರುವುದಕ್ಕೆ ನಮ್ಮ ಜವಾಬ್ದಾರಿ ಕೂಡ ಹೆಚ್ಚಿದೆ. ಅಭಿವೃದ್ಧಿಗಾಗಿ ಏನು ಮಾಡಬೇಕು ಎಂಬುವುದನ್ನು ತಿಳಿದುಕೊಳ್ಳಬೇಕು. ಪ್ರಮುಖವಾಗಿ ಶೈಕ್ಷಣಿಕವಾಗಿ ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ನಮ್ಮಿಂದ ಸಾಧ್ಯವಾಗದೆ ಇರುವುದೇ ಇದಕ್ಕೆ ಕಾರಣ. ಮಕ್ಕಳನ್ನು ಶೈಕ್ಷಣಿಕವಾಗಿ ಮೇಲ್ಪಂಕ್ತಿಗೆ ತೆಗೆದುಕೊಂಡು ಹೋಗುವ ಕೆಲಸವಾಗಬೇಕಿದೆ ಎಂದರು.ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಉದ್ದೇಶದಿಂದ ಮಹಿಳೆಯರಿಗೆ ಎಲ್ಲ ರೀತಿಯ ಅವಕಾಶ ನೀಡಲಾಗಿದೆ. ಸುಸಜ್ಜಿತ ಸಮಾಜ ನಿರ್ಮಾಣವಾಗಬೇಕಾದರೆ ಬದುಕಿಗೆ ಸುಸ್ಥಿರತೆ ಬರಬೇಕು. ಕೃತಜ್ಞತಾ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಸುಸಂಸ್ಕೃತವಾದ ಶಿಕ್ಷಣ ಒಂದು ನೀಡಿದರೆ ಸಾಕು ಬಳಿಕ ಮಕ್ಕಳೇ ತಮ್ಮ ಬದುಕು ತಾವೇ ಕಟ್ಟಿಕೊಳ್ಳುತ್ತಾರೆ ಎಂದರು. ಈ ಸಂದರ್ಭ ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ತಾಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ. ನಾಯ್ಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣ ಕುಳ್ಳುರ, ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ರೆಡ್ಡಿ ಮುಂತಾದವರಿದ್ದರು. ರುಕ್ಮಿಣಿ ಮೆಗಾಡೆ ಸ್ವಾಗತ ಗೀತೆ ಹೇಳಿದರು. ಶ್ರೀನಿವಾಸ ಮರಾಠೆ ಸ್ವಾಗತಿಸಿ ನಿರೂಪಿಸಿದರು.