ಮಕ್ಕಳನ್ನು ಸಂಸ್ಕಾರವಂತರನ್ನಾಗಿಸುವ ಶಿಕ್ಷಣ ನೀಡಿ

| Published : Feb 24 2025, 12:37 AM IST

ಸಾರಾಂಶ

ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೂಲಕ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಹೊಣೆ ಅರಿಯಬೇಕು ಎಂದು ದೇವನೂರು ಮಹಾಸಂಸ್ಥಾನ ಮಠಾಧ್ಯಕ್ಷ ಮಹಾಂತ ಸ್ವಾಮಿಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೂಲಕ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಹೊಣೆ ಅರಿಯಬೇಕು ಎಂದು ದೇವನೂರು ಮಹಾಸಂಸ್ಥಾನ ಮಠಾಧ್ಯಕ್ಷ ಮಹಾಂತ ಸ್ವಾಮಿಜಿ ಹೇಳಿದರು.

ಅವರು ಪಟ್ಟಣದ ಜಿ ಪಿ ಮಲ್ಲಪ್ಪಪುರ ಬಡಾವಣೆಯಲ್ಲಿರುವ ಶಾಲಾ ವಾರ್ಷಿಕೋತ್ಸವ ಗುರು ಸಂಭ್ರಮ ಸಮಾರಂಭದ

ಸಾನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಸಹ ತಾವು ನಡೆದು ಬಂದ ಹಾದಿ, ಸಾಗಿ ಬಂಧ ಧರ್ಮ, ಬೆಳವಣಿಗೆ ಸಹಕರಿಸಿದ ಗುರು , ಹಿರಿಯರು, ಪೋಷಕರಿಗೆ ವಿಧೇಯರಾಗಬೇಕು. ಜೊತೆಗೆ ಮಾನವೀಯ ಮೌಲ್ಯ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಅಂದು ಶಿಕ್ಷಣ ಉಳ್ಳವರ ಸಂಪತ್ತಾಗಿತ್ತು, ಇಂದು ಶಿಕ್ಷಣ ಎಲ್ಲಾ ಸಮಾಜಕ್ಕೂ ದೊರಕುತ್ತಿದ್ದು, ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಿ, ಉನ್ನತ ಹುದ್ದೆ ಅಲಂಕರಿಸುವಲ್ಲಿ ಅವರನ್ನು ಸುಶಿಕ್ಷಿತರನ್ನಾಗಿಸಿ, ಕೊಳ್ಳೇಗಾಲ ಪಟ್ಟಣದಲ್ಲಿ ಸ್ಥಾಪಿಸಲಾಗಿರುವ ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯು ಪೋಷಕರು, ದಾನಿಗಳು ಮತ್ತು ಶಿಕ್ಷಕರುಗಳ ಸಹಕಾರದೊಂದಿಗೆ 10 ವರುಷ ತುಂಬಿರುವುದು ಸಂತಸದ ಸಂಗತಿ ಎಂದರು.

ಈ ವೇಳೆ ಸ್ಥಳ ದಾನ ನೀಡಿದ ಕೊಂಗವಿರೇಗೌಡರ ಕುಟುಂಬ ಸದಸ್ಯ ಹಲಗೇಶ್ ಮಾತನಾಡಿ, ನಮ್ಮ ಪೂರ್ವಿಕರು ಗುರುಮಲ್ಲೇಶ್ವರ ಸಂಸ್ಥೆಗೆ ಸ್ಥಳ ದಾನ ನೀಡಿದ್ದರು. ಈ ಸಂಸ್ಥೆ ನೀಡಿದ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಲವಾರು ವರ್ಷಗಳ ಕಾಲ ವಿದ್ಯಾರ್ಥಿನಿಲಯ ಸ್ಥಾಪಿಸಿ ಮಕ್ಕಳ ಅಭ್ಯುದಯಕ್ಕೆ ಸ್ಪಂದಿಸಲಾಗಿತ್ತು. ದಶಕಗಳ ಹಿಂದೆ ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಇಂದು ಸಂಸ್ಥೆ ಉನ್ನತ ಮಟ್ಟಕ್ಕೆರಿ ಪ್ರಗತಿಯತ್ತ ಸಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಈ ವೇಳೆ ಸಂಸ್ಥೆಗೆ ದಶಕದ ಸಂಭ್ರಮದ ಹಿನ್ನೆಲೆ ಸಂಸ್ಥೆ ಸಂಸ್ಥಾಪಕರಾದ ಮಹಾಂತ ಸ್ವಾಮಿಜಿಯವರಿಗೆ ಭಕ್ತ ಸಮೂಹ ಹಾಗೂ ಸಂಸ್ಥೆಯ ಶಿಕ್ಷಕರುಗಳು ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ವೀರಶೈವ ಮಹಾಸಭೆ ತಾಲೂಕು ಘಟಕದ ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ದೊಡ್ಡಿಂದುವಾಡಿ ವೀರಭದ್ರಸ್ವಾಮಿ, ದೇವನೂರು ಗುರುಮಲ್ಲೇಶ್ವರ ಮಹಾಸಂಸ್ಥಾನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೃಷಬೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳ, ಸಂಪನ್ಮೂಲ ಸಮನ್ವಯಾಧಿಕಾರಿ ಮಹದೇವಕುಮಾರ್, ಬಸವರಾಜು, ದೊರೆ, ಅಚ್ಗಾಳ್ ಮಹದೇವಸ್ವಾಮಿ. ತಿಮ್ಮರಾಜಿಪುರ ಮಹದೇವಸ್ವಾಮಿ ಇನ್ನಿತರಿದ್ದರು.