ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ-ಶಾಸಕ ಲಮಾಣಿ

| Published : Sep 06 2024, 01:11 AM IST

ಸಾರಾಂಶ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ಹಾವೇರಿ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹಾವೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ೧೩೬ನೇ ಜನ್ಮದಿನೋತ್ಸವದ ಅಂಗವಾಗಿ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಗುರು-ಶಿಷ್ಯರ ಸಂಬಂಧ ಅನ್ಯೋನ್ಯವಾಗಿರುವ ಜತೆಗೆ ಶಿಸ್ತು ಕಲಿಸಬೇಕು, ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗಳಿಗೆ ತಯಾರಿಸುವಲ್ಲಿ ಗುರುಶಕ್ತಿ ದೊಡ್ಡದು ಎಂದರು.

ಶಿಕ್ಷಕರು ಕೆಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಹಂತ-ಹಂತವಾಗಿ ಈಡೇರಿಸಲಾಗುವುದು. ಶಾಲೆಗಳ ಆಸ್ತಿ ಸಂರಕ್ಷಣೆಗೆ ಇ-ಆಸ್ತಿ, ಶುದ್ಧ ಕುಡಿಯುವ ನೀರಿನ ಘಟಕ, ತ್ಯಾಜ್ಯ ವಿಲೇವಾರಿ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು. ಎಲ್ಲ ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಕಾಂಪೌಂಡ್‌, ಶೌಚಾಲಯ, ಭೋಜನಾಲಯ ವ್ಯವಸ್ಥೆಗೆ ಎನ್‌ಆರ್‌ಇಜಿ ಅಡಿ ಅವಕಾಶವಿದ್ದು, ತಾಲೂಕು ಪಂಚಾಯಿತಿ ಸಭೆಯಲ್ಲಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಸೂಚಿಸಲಾಗುವುದು. ಶಿಕ್ಷಕರು ತಮ್ಮ ಶಾಲೆ ವ್ಯಾಪ್ತಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು, ಮೂಲಭೂತ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ ಮಾತನಾಡಿ, ಸಾರ್ವಜನಿಕರು ಶಿಕ್ಷಕರ ದಿನ ಆಚರಿಸುವಂತಾಗಬೇಕು. ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೆ ಆದರ್ಶ ಮೌಲ್ಯ ಹಾಗೂ ಶಿಸ್ತು ಸೇರಿದಂತೆ ಉತ್ತಮ ಗುಣಗಳನ್ನು ಕಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ, ಧೈರ್ಯ, ಸಂಯಮ, ರಾಷ್ಟ್ರಾಭಿಮಾನ ತುಂಬುವ ಕೆಲಸ ಶಿಕ್ಷಕರಿಂದಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಸಿದರೆ ಸಾಲದು, ಜೀವನ ಕೌಶಲ್ಯ ಕಲಿಸುವುದು ಬಹಳ ಮುಖ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ನೈತಿಕ, ಮೌಲ್ಯಯುತ ಶಿಕ್ಷಣ, ಸಾಮಾಜಿಕ ನ್ಯಾಯ, ಭ್ರಾತೃತ್ವದ ಶಿಕ್ಷಣ ನೀಡಬೇಕು. ಅಂದಾಗ ಮಾತ್ರ ಪ್ರಬಲ ರಾಷ್ಟ್ರಕಟ್ಟಲು ಸಾಧ್ಯ ಎಂದು ಹೇಳಿದರು.

ಪಾಶ್ಚಿಮಾತ್ಯ ಅನುಕರಣೆಯಿಂದ ಯುವಜನತೆ ದಾರಿ ತಪ್ಪುತ್ತಿರುವುದು ವಿಷಾದದ ಸಂಗತಿ. ಯುವ ಸಮೂಹವನ್ನು ಕ್ರಿಯಾಶೀಲ ಹಾಗೂ ಸೃಜನಾತ್ಮಕರನ್ನಾಗಿ ಮಾಡುವ ಮೂಲಕ ಶಕ್ತಿಯುತ ರಾಷ್ಟ್ರಕಟ್ಟಬೇಕಾಗಿದೆ. ಸದೃಢ ರಾಷ್ಟ್ರ ಕಟ್ಟುವುದು ನಾವು ನೀಡುವ ಶಿಕ್ಷಣದ ಮೇಲೆ ನಿಂತಿದೆ. ಈ ದೇಶದ ಆಚಾರ, ವಿಚಾರ, ಸಂಸ್ಕೃತಿ, ರಾಷ್ಟ್ರಾಭಿಮಾನ ಇಂದಿನ ಶಿಕ್ಷಣದಲ್ಲಿ ಬೇಕಾಗಿದೆ ಎಂದರು.

ಗುರುಗಳಿಗೆ ಅನಾದಿ ಕಾಲದಿಂದ ಗೌರವಕೊಡುತ್ತ ಬರಲಾಗಿದೆ, ಕಂಚಿ, ಕಾಶಿ, ನಲಂದಾ ವಿಶ್ವವಿದ್ಯಾಲಯಗಳಲ್ಲಿ ವಿದೇಶಿಗರಿಗೆ ಜ್ಞಾನ ಊಣಬಡಿಸಿದ ಭಾರತ ದೇಶ ಆವತ್ತೇ ಜಗದ್ಗುರುವಾಗಿತ್ತು ಎಂದು ಹೇಳಿದರು.

ಜಿಪಂ ಸಿಇಒ ಅಕ್ಷಯ್ ಶ್ರೀಧರ ಮಾತನಾಡಿ, ಸ್ಮಾರ್ಟ್‌ಕ್ಲಾಸ್‌ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬಹುದು. ಆದರೆ ನಡತೆ ಹಾಗೂ ಮೌಲ್ಯಯುತ ಶಿಕ್ಷಣ ತಂತ್ರಜ್ಞಾನದಿಂದ ಆಗದು. ಇದು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳು ಮಣ್ಣು ಇದ್ದ ಹಾಗೆ, ಶಿಕ್ಷಕರು ಅವರಿಗೆ ಆಕಾರ ನೀಡುವ ಕೆಲಸಮಾಡಬೇಕು ಎಂದರು.

ಸಾನಿಧ್ಯ ವಹಿಸಿದ್ದ ಉಪ್ಪಿನಬೆಟಗೇರಿ ಶ್ರೀಜಗದ್ಗುರು ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮಿಗಳು ಶಿಕ್ಷಕರ ಗುರುತರ ಜವಾಬ್ದಾರಿ ಕುರಿತು ಮಾತನಾಡಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು.

ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ: ಸಾಕ್ಷರತಾ ದಿನಾಚರಣೆ ಅಂಗವಾಗಿ ಎಲ್ಲರಿಗೂ ಶಿಕ್ಷಣ ಎಂಬ ಪೋಸ್ಟ್‌ ಬಿಡುಗಡೆ ಮಾಡಲಾಯಿತು. ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ತಲಾ ಏಳು ಶಿಕ್ಷಕರು ಸೇರಿದಂತೆ ಒಟ್ಟು ೨೧ ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕರನ್ನು ಸಹ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎಂ.ಎ. ಎಣ್ಣಿ, ಡಯಟ್ ಉಪನಿರ್ದೇಶಕ ಗಿರೀಶ ಪದಕಿ, ಬಿಇಒ ಮೌನೇಶ ಬಡಿಗೇರ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ನಿಜಲಿಂಗಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಶಿಕ್ಷಕ ನಾಗರಾಜ ನಡುವಿನಮಠ ಇದ್ದರು.