ಸಾರಾಂಶ
ಚನ್ನಪಟ್ಟಣ: ಇಂದಿನ ಶಿಕ್ಷಕರು ಅಪ್ ಡೇಟ್ ಆಗುವುದರ ಜೊತೆಗೆ ಮಕ್ಕಳಿಗೆ ಯಾಂತ್ರಿಕತೆಯ ಶಿಕ್ಷಣ ಬಿಟ್ಟು ತಾಂತ್ರಿಕತೆಯುಳ್ಳ ಶಿಕ್ಷಣವನ್ನು ಕಲಿಸಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಕಿವಿಮಾತು ಹೇಳಿದರು.
ತಾಲೂಕಿನ ದೊಡ್ಡಮಳೂರಲ್ಲಿ ತಾಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಮತ್ತು ಶಿಕ್ಷಣ ಮನುಷ್ಯನ ಪ್ರಥಮ ಆದ್ಯತೆಗಳಾಗಿದ್ದು, ಇವುಗಳನ್ನು ನಿರ್ವಹಣೆ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಇಂದಿನ ತಂತ್ರಜ್ಞಾನ ಹಾಗೂ ಅಗತ್ಯಗಳಿಗೆ ತಕ್ಕಂತೆ ಶಿಕ್ಷಣ ನೀಡುವುದು ಇಂದಿನ ಆದ್ಯತೆಯಾಗಬೇಕಿದೆ ಎಂದು ಸಲಹೆ ನೀಡಿದರು.ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ಕೊಡುಗೆ ದೊಡ್ಡದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗದೆ, ಇಡೀ ಸಮಾಜ ಶಿಕ್ಷಕರ ದಿನಾಚರಣೆ ಆಚರಿಸಿ ಶಿಕ್ಷಕ ಸಮುದಾಯವನ್ನು ಗೌರವಿಸಬೇಕು. ಶಿಕ್ಷಕರು ಸಮಾಜಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಬದುಕಿನಲ್ಲಿ ಮಾರ್ಗದರ್ಶನ ಮಾಡಿದ ಶಿಕ್ಷಕರು ಸ್ಮರಣೀಯ ಎಂದು ಹೇಳಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಕೆಲವು ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಅದನ್ನು ಪರಿಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷಣದ ಮೌಲ್ಯ ಕಡಿಮೆ ಆಗುತ್ತಿದ್ದು, ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಿ. ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುವುದು. ನೀವು ಇನ್ನು ಉತ್ತಮವಾದ ಶಿಕ್ಷಣ ನೀಡಿ ಸತ್ಪ್ರಜೆಗಳನ್ನು ತಯಾರು ಮಾಡಿ ಎಂದು ಸಲಹೆ ನೀಡಿದರು.ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಕರಿಗೆ ಇಂದು ಅನ್ಯಕಾರ್ಯಗಳೇ ಜಾಸ್ತಿಯಾಗಿದ್ದು, ಅವರನ್ನು ಪಾಠ ಮಾಡಲು ಬಿಡಬೇಕು. ಚುನಾವಣೆ, ಸಮೀಕ್ಷೆ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುವ ಪರಿಪಾಠ ಕೈ ಬಿಟ್ಟಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಿದರು.ಇದೇ ಸಂದರ್ಭದಲ್ಲಿ ೨೦೨೪- ೨೫ ನೇ ಸಾಲಿನಲ್ಲಿ ನಿವೃತ್ತಿ ಪಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಬೀಳ್ಕೊಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ಮಾಜಿ ಶಾಸಕ ಎಂ.ಸಿ.ಅಶ್ವಥ್, ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪ್ರಮೋದ್, ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷ ರಂಗನಾಥ್, ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್, ಮಳೂರು ಗ್ರಾಪಂ ಅಧ್ಯಕ್ಷ ಬಿ.ಟಿ. ದಿಲೀಪ್, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಸ್ವಾಮಿ ಎಸ್, ಅಭಿವೃದ್ಧಿ ಉಪನಿರ್ದೇಶಕ ವೆಂಕಟೇಶ್ ಎನ್, ತಹಸೀಲ್ದಾರ್ ಬಿ.ಎನ್. ಗಿರೀಶ್, ತಾಪಂ ಇಒ ಸಂದೀಪ್, ಆರಕ್ಷಕ ಉಪ ಅಧೀಕ್ಷಕ ಕೆ.ಸಿ.ಗಿರಿ, ನಗರಸಭೆ ಪೌರಾಯುಕ್ತ ಮಹೇಂದ್ರ, ಕ್ಷೇತ್ರ ಸಮನ್ವಯ ಅಧಿಕಾರಿ ಸಿ. ರಾಜಶೇಖರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿದ್ದರಾಜು ಎಸ್ ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಭಾರತಿ ಬಬಲೇಶ್ವರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಧೀಂದ್ರ, ತಾಲೂಕು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಸವರಾಜು ಇತರರಿದ್ದರು.ಪೊಟೋ೧೦ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಚೌಡೇಶ್ವರಿ ಕಲ್ಯಾಣಮಹಲ್‌ನಲ್ಲಿ ಆಯೋಜಿಸಿದ್ದ ಚನ್ನಪಟ್ಟಣ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.