ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಒಳ್ಳೆಯ ಪ್ರಜೆಗಳಾಗಿ ರೂಪಿಸಿ: ವೆಂಕಟೇಶ್

| Published : Dec 08 2024, 01:18 AM IST

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಒಳ್ಳೆಯ ಪ್ರಜೆಗಳಾಗಿ ರೂಪಿಸಿ: ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಮನೆಯಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ವೆಂಕಟೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹದಿನೆಂಟು ವರ್ಷದೊಳಗಿನ ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ, ದೈಹಿಕ ಹಾಗೂ ಭಾಷಾ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದ್ದು, ಈ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಗಮನಹರಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್ ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಶುಶ್ರೂಷಕರ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ಹೊರವಲಯದಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಬಾಲನ್ಯಾಯ ಕಾಯ್ದೆ (ಮಕ್ಕಳ ಪೋಷಣೆ ಮತ್ತು ರಕ್ಷಣೆ), ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ದತ್ತು ಅಧಿನಿಯಮ ಕುರಿತು ‘ನರ್ಸಿಂಗ್ ವಿದ್ಯಾರ್ಥಿಗಳಿಗೆ ಅರಿವು’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಯಸ್ಕ ಮಕ್ಕಳಲ್ಲಿ ಕಲಿಕೆಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಜೊತೆಗೆ ಒಳ್ಳೆಯ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಯಲು ಅವಕಾಶಗಳಿದ್ದು, ಆ ನಿಟ್ಟಿನಲ್ಲಿ ಮನೆಯಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕು ಎಂದು ವೆಂಕಟೇಶ್ ಕರೆ ನೀಡಿದರು.

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಕಾಳಜಿ ವಹಿಸಿದಾಗ ಸಮಾಜದಲ್ಲಿ ಸುಧಾರಣೆ ಮತ್ತು ಬದಲಾವಣೆ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಮಕ್ಕಳು ಮತ್ತು ಮಹಿಳೆಯರಿಗೆ ಮೊದಲ ಆದ್ಯತೆ ನೀಡಬೇಕು ಎಂದು ವಿವರಿಸಿದರು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಹಲವು ಕಾನೂನು ಕಾಯ್ದೆಗಳು ಜಾರಿಗೊಂಡಿದ್ದರೂ ಸಹ ಮಹಿಳೆಯರು ಮತ್ತು ಮಕ್ಕಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುವುದು ಕಡಿಮೆಯಾಗಿಲ್ಲ. ಆದ್ದರಿಂದ ವ್ಯವಸ್ಥೆಯನ್ನು ಸರಿಪಡಿಸಲು ಯುವಜನರಲ್ಲಿ ಬಾಲ್ಯ ವ್ಯವಸ್ಥೆಯಲ್ಲಿಯೇ ಮೌಲ್ಯಯುತ ಶಿಕ್ಷಣ ಕಲಿತಿರಬೇಕು. ಅಂತಃಕರಣ ಮಾನವೀಯತೆ ಇದ್ದಾಗ ಮಾತ್ರ ಸಮಾಜದಲ್ಲಿ ಉತ್ತಮ ಸಮಾಜ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಶುಶ್ರೂಷಕರ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಪಾತ್ರ ಹೆಚ್ಚಿನದ್ದಾಗಿದೆ ಎಂದು ವಿವರಿಸಿದರು.

ಮಹಿಳೆಯರು ಮತ್ತು ಮಕ್ಕಳ ಆರೋಗ್ಯ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಹೇಗಿದೆ ಎಂದು ಅರಿತುಕೊಳ್ಳಬೇಕು. ತೊಂದರೆಗೆ ಸಿಲುಕಿದವರನ್ನು ರಕ್ಷಿಸಬೇಕು. ಯಾವುದೇ ಕಾರಣಕ್ಕೂ ಒತ್ತಡ ನಿರ್ಮಾಣ ಮಾಡಬಾರದು ಎಂದರು.

ಹರೆಯದ ವಯಸ್ಸಿನಲ್ಲಿ ನಿಯಂತ್ರಣ ಅತ್ಯಗತ್ಯ. ಬದುಕಿನ ಜೀವನ ಒಂದು ರೀತಿ ಕಠಿಣವಾಗಿದ್ದು, ಮಕ್ಕಳು ದುಶ್ಚಟಗಳಿಗೆ ಬಲಯಾಗದೆ ಮೌಲ್ಯಯುತ ಬದುಕು ನಡೆಸಬೇಕು. ಸಣ್ಣ ಸಣ್ಣ ವಿಚಾರಗಳಿಗೂ ಸಿಟ್ಟು ಮಾಡಿಕೊಳ್ಳಬಾರದು. ಮೋಸ, ವಂಚನೆಗೆ, ಆಸೆ, ಆಕಾಂಕ್ಷೆಗಳಿಗೆ ಬಲಿಯಾಗದೆ ಪ್ರಬುದ್ಧರಾಗಿ ಯೋಚಿಸಬೇಕು ಎಂದರು.

ಮಕ್ಕಳು ದೌರ್ಜನ್ಯಕ್ಕೆ ಒಳಗಾಗುವುದನ್ನು ತಡೆಯಬೇಕು. ಮಾಹಿತಿ ಶಿಕ್ಷಣ ನೀಡಬೇಕು. ಮಕ್ಕಳ ಸಹಾಯವಾಣಿ 1098 ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ವೆಂಕಟೇಶ್ ಅವರು ವಿವರಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಮಾತನಾಡಿ ಸಮಾಜದಲ್ಲಿ ಬಾಲ್ಯ ವಿವಾಹಕ್ಕೆ ಜವಾಬ್ದಾರಿ ಕಳೆದುಕೊಳ್ಳುವುದು, ಮೂಡನಂಬಿಕೆ, ಅಜ್ಞಾನ ಮತ್ತಿತರವು ಕಾರಣವಾಗಿದೆ. ಆದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

‘ಸಮಾಜದ ಏಳಿಗೆಗಾಗಿ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ನಿರ್ವಹಿಸುವ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಇದರಿಂದ ಒಳ್ಳೆಯ ಫಲಿತಾಂಶ ದೊರೆಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ಅಭಿಪ್ರಾಯಪಟ್ಟರು.’

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಿ.ಈರಸ್ವಾಮಿ ಅವರು ಮಾತನಾಡಿ ಮಕ್ಕಳ ರಕ್ಷಣಾ ಘಟಕ ವತಿಯಿಂದ ಪ್ರಮುಖವಾಗಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪುನರ್‌ವಸತಿ ಕಲ್ಪಿಸುವುದು, ಆರೋಗ್ಯ ಶಿಕ್ಷಣ ನೀಡುವುದು ಮತ್ತಿತರ ಕಾರ್ಯಕ್ರಮಗಳಾಗಿದೆ ಎಂದರು.

‘ಅನಾದಿ ಕಾಲದಿಂದಲೂ ಮಹಿಳೆಯರು ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಲೇ ಬಂದಿದೆ. ಮಹಿಳೆಯರು ಮತ್ತು ಮಕ್ಕಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಮಹಿಳೆಯರು ಕುಟುಂಬದ ಸುಖ, ದುಃಖ, ಸಂತಸದಲ್ಲಿ ಪಾಲ್ಗೊಂಡರೂ ಸಹ ಶೋಷಣೆ ತಪ್ಪುವುದಿಲ್ಲ, ಹಲವು ಸಂಪ್ರದಾಯ ಆಚರಣೆಗೆ ಒಳಗಾಗಿ ಪದೇ ಪದೇ ನಿಂದನೆಗೆ ಒಳಗಾಗುವುದು ಕಂಡು ಬರುತ್ತಿದೆ ಎಂದರು.

‘ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ಹಾಡಿಗಳು ಮತ್ತು ಲೈನ್‌ಮನೆಗಳಲ್ಲಿ ಕಂಡುಬರುತ್ತಿವೆ. ಹಾಗೆಯೇ ಜಿಲ್ಲೆಯಲ್ಲಿ ಪ್ರತಿ ತಿಂಗಳು 50 ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಕೆಟ್ಟ ಪದ್ಧತಿಯನ್ನು ತೊಡೆದುಹಾಕಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.’

ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನಿರಬಾರದು. ಅನಿಷ್ಠ ಪದ್ಧತಿ ಹೋಗಲಾಡಿಸಲು ಎಲ್ಲರೂ ಪ್ರಯತ್ನಿಸಬೇಕು. ಪ್ರತಿಯೊಬ್ಬರಲ್ಲಿಯೂ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಈರಸ್ವಾಮಿ ಒತ್ತಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಎ.ಎಂ.ಸೂರಜ್, ಮಕ್ಕಳ ವಿಶೇಷ ಪೊಲೀಸ್ ಘಟಕದ ಎಂ.ಬಿ.ಸುಮತಿ ಅವರು ಮಾತನಾಡಿದರು. ಪೊಲೀಸ್ ಉಪಾಧೀಕ್ಷಕರಾದ ರವಿ ಇತರರು ಇದ್ದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಕಾರಿ ಶುಶ್ರೂಷಕ ಕಾಲೇಜಿನ ಪ್ರಾಂಶುಪಾಲರಾದ ಎ.ಕೆ.ಮಂಜುಳ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಹ ಪ್ರಾಧ್ಯಾಪಕರಾದ ಕೆ.ಪಿ.ಗುರುಪಾದ ಅವರು ನಿರೂಪಿಸಿದರು. ಎಸ್.ಎನ್.ರಂಜಿನಿ ವಂದಿಸಿದರು.