ದಲಿತರಿಗೆ ಸಿಎಂ ಹುದ್ದೆ ನೀಡಿ: ಮಲ್ಲಿಕಾರ್ಜುನ ಕ್ರಾಂತಿ

| Published : Jul 07 2024, 01:22 AM IST

ಸಾರಾಂಶ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನವನ್ನು ದಲಿತರಿಗೆ ನೀಡಬೇಕು ಎಂದು ಕೇಂದ್ರದ ಕಾಂಗ್ರೆಸ್ ವರಿಷ್ಠರಲ್ಲಿ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನವನ್ನು ದಲಿತರಿಗೆ ನೀಡಬೇಕು ಎಂದು ಕೇಂದ್ರದ ಕಾಂಗ್ರೆಸ್ ವರಿಷ್ಠರಲ್ಲಿ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಹೇಳಿದರು.

ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ದಲಿತರು, ಶೋಷಿತರು, ದಮನಿತರ ಮತ ಪಡೆಯುತ್ತಾರೆ. ಅವರಿಂದ ಸರ್ಕಾರ ರಚಿಸುತ್ತಾರೆ. ಆದರೆ, ರಾಜ್ಯ ಸರ್ಕಾರದ ಉನ್ನತ ಹುದ್ದೆ ಮುಖ್ಯಮಂತ್ರಿ ಸ್ಥಾನ ಬಂದ ಕೂಡಲೇ ಜಾತಿ ಬರುತ್ತದೆ. ಇದ್ಯಾವುದನ್ನು ಪರಿಗಣಿಸದೇ ವರಿಷ್ಠರು ದಲಿತರಿಗೆ ಸಿಎಂ ಹುದ್ದೆ ನೀಡಬೇಕು ಎಂದರು.

ಅಸ್ಪೃಶ್ಯರಿಗೆ ಸಿಎಂ ಹುದ್ದೆ ಯಾಕಿಲ್ಲ?:

ಸಂವಿಧಾನದ ಪ್ರತಿಯೊಂದು ಅಂಶಗಳನ್ನು ಕಾಂಗ್ರೆಸ್ ಪಕ್ಷ ಗುಣಗಾನ ಮಾಡುತ್ತದೆ. ಮುಖ್ಯಮಂತ್ರಿ ಹುದ್ದೆಯನ್ನು ಇದುವರೆಗೂ ಅಸ್ಪೃಶ್ಯರಿಗೆ ಯಾಕೆ ನೀಡಿಲ್ಲ? ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಲಿತರೊಬ್ಬರಿಗೆ ಮುಖ್ಯಮಂತ್ರಿ ಮಾಡಿ ಇತಿಹಾಸ ಸೃಷ್ಟಿಸಬೇಕು. ಅಂದರೆ ಈ ನಾಡಿನ ಬಡವರು, ದಲಿತರು, ಮಹಿಳೆಯರು, ಮುಸ್ಲಿಮರು ಕಾಂಗ್ರೆಸಿಗೆ ಹೋದ ಚುನಾವಣೆಗಿಂತ ಹೆಚ್ಚಿನ ಮತ ನೀಡಿ, ಅಧಿಕಾರಕ್ಕೆ ತಂದಿರುವುದಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಬಡವರು, ದಲಿತರು ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದಾರೆ. ಆದರೆ, ಕಾಂಗ್ರೆಸ್ ಬಡವರನ್ನು ಗೆಲ್ಲಿಸುತ್ತದೆಯೇ ಎಂಬ ಪ್ರಶ್ನೆ ದಲಿತರ ಮುಂದಿದೆ. ದಲಿತರು ಗೆಲ್ಲದೇ ಕೋಮುವಾದ ಸೋಲುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನ ಬದಲಿಸುತ್ತೇವೆ ಎಂದವರನ್ನೇ ದಲಿತರು ಬದಲಿಸಿದ್ದಾರೆ. ದಲಿತರಿಗೆ ಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಆದರೆ, ಇಂದಿನ ಜಾತಿ ಆಧಾರದಲ್ಲಿ ಮಠಾಧೀಶರು ತಮ್ಮ ತಮ್ಮ ಜಾತಿಗೆ ಸೀಮಿತವಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಸನ್ನಿವೇಶಗಳು ಪ್ರಜಾತಂತ್ರ ವ್ಯವಸ್ಥೆಯ ಮಾನವನ್ನು ಬೀದಿಗೆ ತಂದು ನಿಲ್ಲಿಸಿವೆ ಎಂದು ಮಾತಿನ ಚಾಟಿ ಬೀಸಿದರು.

ಕಾವಿಧಾರಿಗಳೋ, ರಾಜಕಾರಣಿಗಳೋ?:

ಅಧ್ಯಾತ್ಮ ಬೋಧಿಸುವ ಸಾಧು, ಸಂತರು ಕಾವಿಧಾರಿಗಳೋ ಅಥವಾ ರಾಜಕಾರಣಿಗಳೋ ಎಂಬ ಅನುಮಾನ ಜನಸಾಮನ್ಯರಲ್ಲಿ ಮೂಡುತ್ತಿದೆ. ಬುದ್ಧ, ಬಸವ, ಪರಮಹಂಸ, ಸ್ವಾಮಿ ವಿವೇಕಾನಂದ, ರಮಣ, ನಾರಾಯಣಗುರು ಮೊದಲಾದ ನೀತಿಗುರುಗಳು ತೆರೆಯ ಹಿಂದೆ ಸರಿದಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ಬಹಿರಂಗವಾಗಿ ಗೇಲಿ ಮಾಡುತ್ತಿರುವ ಜಾತಿ ಗುರುಗಳ ಸಂಖ್ಯೆ ಹೆಚ್ಚುತ್ತಿದೆ. ಈ ಬೆಳವಣೆಗೆ ಒಳ್ಳೆಯದಲ್ಲ. ಮಠಾಧೀಶರು ರಾಜಕೀಯ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕದ್ದಲ್ಲ ಎಂದು ಛೇಡಿಸಿದರು.

ಸಂಘಟನೆಯ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಮಾತನಾಡಿದರು. ಅಜೀಜ್ ಸಾಬ ಐಕೂರು, ಮಲ್ಲಿಕಾರ್ಜುನ ಕುರಕುಂದಿ, ಮಲ್ಲಿಕಾರ್ಜುನ ತಳ್ಳಳ್ಳಿ, ಮಾನಯ್ಯ ಬಿಜಾಸ್ಪುರ, ಮಹಾದೇವಪ್ಪ ಬಿಜಾಸ್ಪುರ, ಬಸವರಾಜ ದೊಡ್ಡಮನಿ, ಬಸವರಾಜ ಗೋನಾಳ, ಭೀಮಣ್ಣ ಕ್ಯಾತನಾಳ, ಆಂಜನೇಯ ಎಲ್ಹೇರಿ, ಮರಿಲಿಂಗಪ್ಪ ನಾಟೇಕಾರ, ಮಾನಪ್ಪ ಶೆಳ್ಳಗಿ ಸೇರಿದಂತೆ ಇತರರಿದ್ದರು.