ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ವಾರದೊಳಗೆ ಪರಿಹಾರ ನೀಡಬೇಕು. ಜೊತೆಗೆ ಸಂಪೂರ್ಣವಾಗಿ ಹಾನಿಯಾಗಿರುವ ರಸ್ತೆಗಳನ್ನು ಪಟ್ಟಿ ಮಾಡಿ ವರದಿ ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ. 32ರಷ್ಟು ಹೆಚ್ಚು ಮಳೆಯಾಗಿದೆ. ಇದರ ಹಿನ್ನೆಲೆ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಜಿಲ್ಲಾಡಳಿತವನ್ನು ಚುರುಕು ಮಾಡಿ ಪರಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ. ಇಲ್ಲಿಯವರೆಗೆ 65 ರಿಂದ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿ ಬಂದಿದೆ. ಬೆಳೆ ಹಾನಿಗೆ ಇನ್ನೊಂದು ವಾರದಲ್ಲಿ ಪರಿಹಾರ ನೀಡು ವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಸಿರಿಯೂರು ಭೂ ಕುಸಿತ ಸೇರಿ 58 ಮಂದಿ ಬಲಿಯಾಗಿದ್ದಾರೆ. ಅವರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ ಎಂದರು.
ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಸಕಲೇಶಪುರದಲ್ಲಿ ರಸ್ತೆಗಳು ಹಾಳಾಗಿವೆ. ಸಂಪೂರ್ಣವಾಗಿ ಹಾಳಾಗಿರುವ ರಸ್ತೆಗಳನ್ನು ಮರು ನಿರ್ಮಾಣ ಮಾಡಲು ಅನುದಾನ ನೀಡುವುದಕ್ಕೆ ಮುಖ್ಯಮಂತ್ರಿಗಳೂ ಒಪ್ಪಿದ್ದಾರೆ. ರಸ್ತೆಗಳು ಸಂಪೂರ್ಣವಾಗಿ ಕುಸಿತವಾಗಿದ್ದರೆ ಅಂತಹಗಳನ್ನು ಪಟ್ಟಿ ಮಾಡಿ ವರದಿ ನೀಡಿದರೆ ಕೂಡಲೇ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಹಾಳಾಗಿರುವ ರಸ್ತೆಗಳ ರಿಪೇರಿಗೆ ಜಿಲ್ಲಾಧಿಕಾರಿಗಳಿಗೆ 760 ಕೋಟಿ ರು. ಅನುದಾನ ನೀಡಿದ್ದೇವೆ. ಸಣ್ಣಪುಟ್ಟ ರಿಪೇರಿಗಳನ್ನು ಕೂಡಲೇ ಮಾಡಿಸುವಂತೆಯೂ ಸೂಚನೆ ನೀಡಲಾಗಿದೆ ಎಂದರು ತಿಳಿಸಿದರು.
ರಾಜ್ಯದಲ್ಲಿ ಜುಲೈನಲ್ಲಿ ಶೇ.32ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶಿವಮೊಗ್ಗದಲ್ಲಿ ಶೇ.25ರಷ್ಟು ಹೆಚ್ಚು ಮಳೆಯಾಗಿದೆ. ಮೇನಲ್ಲಿ ಹೆಚ್ಚು ಮಳೆಯಾಗಿತ್ತು. ಜೂನ್‌ನಲ್ಲಿ ಮಳೆ ಕೊರತೆಯಾಗಿತ್ತು. ಜುಲೈನಲ್ಲಿ ಕೊರತೆಯನ್ನು ನೀಗಿಸಿ ಹೆಚ್ಚು ಮಳೆಯಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕೋಲಾರ, ಕೊಪ್ಪಳ, ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ವಾಡಿಕೆಕೆಗಿಂತ ಕಡಿಮೆ ಮಳೆಯಾಗಿದೆ. ರಾಜ್ಯದಲ್ಲಿ ಶೇ. 32ರಷ್ಟು ಹೆಚ್ಚು ಮಳೆಯಾಗಿದೆ. ಇದರ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸ ಜಿಲ್ಲಾಡಳಿತವನ್ನು ಚುರುಕುಮಾಡಿ ಪರಹಾರ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು.ವಾರದ ಅವಧಿಗೆ ಮಳೆ ಕಡಿಮೆಯಾಗಲಿದ್ದು, ಆ.15ರ ನಂತರ ಮತ್ತೆ ಮುಂಗಾರು ಚುರುಕಾಗಲಿದೆ ಎನ್ನುವ ಮುನ್ಸೂಚನೆ ಇದೆ. ಈ ನಡುವೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಭರ್ತಿಯಾದ ಜಲಾಶಯಗಳಿಂದ ನೀರು ಬಿಡುವಾಗ ನಾವು ಕೂಡ ಎಚ್ಚರಿಕೆ ವಹಿಸಬೇಕಿದೆ. ಮಳೆಯಿಂದ ನದಿಗಳು ತುಂಬಿರುವ ಸಂದರ್ಭದಲ್ಲಿ ಮತ್ತೆ ಜಲಾಶಯದಿಂದ ನೀರು ಬಿಟ್ಟರೆ ನಾವೇ ಪ್ರವಾಹಕ್ಕೆ ದಾರಿ ಮಾಡಿಕೊಟ್ಟಂಗೆ ಆಗುತ್ತದೆ. ಹೀಗಾಗಿ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಸೂಕ್ಷ್ಮವಾಗಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.ಗುಡ್ಡ ಕುಸಿತ ತಡೆ ಕಾಮಗಾರಿ
ಇನ್ನು ಮಲೆನಾಡು ಭಾಗದಲ್ಲಿ ಗುಡ್ಡಗಳ ಕುಸಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಗುಡ್ಡ ಕುಸಿತವನ್ನು ತಡೆಗಟ್ಟುವ ಪ್ರಯತ್ನ ಮಾಡುವ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಈ ವರ್ಷ 100 ಕೋಟಿ ರು. ಮುಂದೆ 200 ಕೋಟಿಯಂತೆ ಒಟ್ಟು 300 ಕೋಟಿ ರು. ವಿಶೇಷ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಈಗಾಗಲೇ ಸರ್ವೆ ಮಾಡಿಸಲಾಗಿದೆ. ಮುಂದೆ ಎಲ್ಲೆಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿರುವ ಕಡೆ ಅದನ್ನು ತಡೆಗಟ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಶಾಶ್ವತ ಪರಿಹಾರಕ್ಕೆ ಸರ್ಕಾರ ಸಿದ್ಧಜಲಾನಯನ ಪ್ರದೇಶದ ಜನರಿಗೆ ಶಾಶ್ವತ ಪರಿಹಾರ ಕೊಡಲು ಸರ್ಕಾರ ಸಿದ್ಧವಿದೆ. ಆದರೆ, ಜನರು ಸಹಕಾರ ಕೊಡಬೇಕು. ಪರ್ಯಾಯ ಜಾಗಗಳಿಗೆ ಜನ ಸ್ಥಳಾಂತರ ಗೊಂಡರೆ ಅವರಿಗೆ ಶಾಶ್ವತ ಪರಿಹಾರ ಕೊಡಬಹುದು. ಹಿಂದಿನಿಂದಲೂ ಪರ್ಯಾಯ ಜಾಗಗಳಲ್ಲಿ ಸ್ಥಳಾಂತರ ಮಾಡಿಕೊಂಡು ಬರಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನಧಿಕೃತ ಜಾಗದಲ್ಲಿ ಮನೆ ಕಟ್ಟಿಕೊಂಡವರು, ದಾಖಲೆ ಇಲ್ಲದ ಮನೆಗಳಿಗೆ ಪರಿಹಾರ ಕೊಡಲು ಕಾನೂನಿನಲ್ಲಿ ಬರಲ್ಲ. ಆದರೂ, ಅನುಕಂಪದ ಆಧಾರದ ಮೇಲೆ ಅನಧಿಕೃತವಾಗಿ ಮನೆಗಳಿಗೂ ಒಂದು ಲಕ್ಷ ಪರಿಹಾರ ಕೊಡಲು ಆದೇಶದ ಹೊರಡಿಸಲಾಗಿದೆ. ಜೊತೆಗೆ ಅವರಿಗೆ ಸೈಟ್ ಲಭ್ಯವಿದ್ದರೆ ಅವರಿಗೆ ಮನೆ ಕಟ್ಟಿಕೊಡಲು ಅನುದಾನ ನೀಡಲಾಗುವುದು ಎಂದು ತಿಳಿಸಿದರು.