ಪರಿಹಾರ ಕೊಡಿ ಇಲ್ಲವೇ ಜಮೀನು ವಾಪಸ್‌ ನೀಡಿ

| Published : Aug 21 2024, 12:37 AM IST

ಸಾರಾಂಶ

ದಾಬಸ್‌ಪೇಟೆ: ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಸೂಕ್ತ ದಾಖಲೆಗಳು ನೀಡಿದ್ದರೂ ಕಳೆದ ಐದು ವರ್ಷಗಳಿಂದ ಪರಿಹಾರ ನೀಡದೆ ಸತಾಯಿಸುತ್ತಿದ್ದು, ಭೂಸ್ವಾಧೀನ ಪರಿಹಾರ ಕೊಡಿ ಇಲ್ಲದಿದ್ದರೆ ನಮ್ಮ ಜಮೀನು ನಮಗೆ ವಾಪಸ್‌ ನೀಡಿ ಎಂದು ಸೋಂಪುರ ಹೋಬಳಿ ರೈತರು ವಿಶೇಷ ಭೂಸ್ವಾಧೀನ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ದಾಬಸ್‌ಪೇಟೆ: ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಸೂಕ್ತ ದಾಖಲೆಗಳು ನೀಡಿದ್ದರೂ ಕಳೆದ ಐದು ವರ್ಷಗಳಿಂದ ಪರಿಹಾರ ನೀಡದೆ ಸತಾಯಿಸುತ್ತಿದ್ದು, ಭೂಸ್ವಾಧೀನ ಪರಿಹಾರ ಕೊಡಿ ಇಲ್ಲದಿದ್ದರೆ ನಮ್ಮ ಜಮೀನು ನಮಗೆ ವಾಪಸ್‌ ನೀಡಿ ಎಂದು ಸೋಂಪುರ ಹೋಬಳಿ ರೈತರು ವಿಶೇಷ ಭೂಸ್ವಾಧೀನ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸಲು ಸರ್ಕಾರ 288 ಕಿ.ಮೀ. ಉದ್ದದ 17000 ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ನಗರ, ರಿಂಗ್ ರಸ್ತೆ (ಎಸ್‌ಟಿಆರ್‌ಆರ್) ನಿರ್ಮಾಣಕ್ಕಾಗಿ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ 340 ಹೆಕ್ಟೇರ್ ಹಾಗೂ ತಮಿಳುನಾಡಿನ 1009.8 ಹೆಕ್ಟೇರ್ ಸೇರಿ ಒಟ್ಟು 1349.8 ಹೆಕ್ಟೇರ್ ಎಕರೆ ಜಮೀನು 2018ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿದೆ. ಆ ಸಂದರ್ಭದಲ್ಲೇ ರೈತರು ಸರಿಯಾದ ದಾಖಲೆಗಳನ್ನು ನೀಡಿದ್ದರೂ ಆರು ವರ್ಷಗಳಿಂದ ಪರಿಹಾರ ನೀಡಿಲ್ಲ ಎಂದು ರೈತರು ಆರೋಪಿಸಿದರು.

ರೈತ ಮುಖಂಡ ಕಂಬಾಳು ಉಮೇಶ್ ಮಾತನಾಡಿ, ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಜಮೀನು ಬಿಟ್ಟು ಬಿಡಿ. ಖಾಸಗಿಯವರಿಗೆ ಮಾರಾಟ ಮಾಡಿ ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತೇವೆ. ಅಧಿಕಾರಿಗಳು ಸೂಕ್ತ ಪರಿಹಾರ ನೀಡದಿದ್ದರೆ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.

ಅಂಚೆಮನೆ ಮಹದೇವಯ್ಯ ಮಾತನಾಡಿ, ಪರಿಹಾರ ವಿಳಂಬ ಸಮಸ್ಯೆಯನ್ನು ಸಂಸದರಾದ ಡಾ.ಕೆ.ಸುಧಾಕರ್, ಡಾ.ಮಂಜುನಾಥ್ ಸೇರಿದಂತೆ ಶಾಸಕರಾದ ಎನ್.ಶ್ರೀನಿವಾಸ್, ಬಾಲಕೃಷ್ಣ ಇತರರನ್ನು ಭೇಟಿ ಮಾಡಿ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ಚರ್ಚಿಸಿ ಶೀಘ್ರ ಪರಿಹಾರ ಬಿಡುಗಡೆ ಮಾಡಿಸುವಂತೆ ಮನವಿ ಸಲ್ಲಿಸುತ್ತೇವೆ ಎಂದರು.

ಪಟ್ಟಣದಲ್ಲಿರುವ ವಿಶೇಷ ಭೂಸ್ವಾಧೀನ ಕಚೇರಿಗೆ ಸೋಂಪುರ ಹೋಬಳಿಯ ಕೆಂಗಲ್, ಹೊನ್ನೇನಹಳ್ಳಿ, ಬರಗೇನಹಳ್ಳಿ, ದಾಬಸ್‌ಪೇಟೆ, ಮಾಗಡಿ, ಬಾಣಾವಾಡಿ ಗ್ರಾಮಗಳ ರೈತರನ್ನು ಅಧಿಕಾರಿಗಳು ಭೂ ಪರಿಹಾರಕ್ಕಾಗಿ ದಿನವೂ ಅಲೆದಾಡುತ್ತಿದ್ದಾರೆ ಎಂದು ರೈತ ಮುಖಂಡ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಮಾಜಿ ಸದಸ್ಯ ಚಂದ್ರಣ್ಣ, ರೈತ ಮುಖಂಡರಾದ ಗಟ್ಟಿಬೈರಪ್ಪ, ಹನುಮಂತರಾಯಪ್ಪ, ಪ್ರಕಾಶ್, ನಾಗರಾಜು, ಶ್ರೀನಿವಾಸ್, ಮಾಗಡಿ ಮಂಜುನಾಥ್, ಪವನ್ ಇತರರಿದ್ದರು.

ಪೋಟೋ 2 : ದಾಬಸ್‌ಪೇಟೆಯಲ್ಲಿರುವ ವಿಶೇಷ ಭೂಸ್ವಾಧೀನ ಕಚೇರಿಗೆ ರೈತರು ಆಗಮಿಸಿ ಭೂಸ್ವಾಧೀನ ಜಮೀನುಗಳಿಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.