ರೈತರಿಗೆ ತೊಗರಿ ನಷ್ಟ ಪರಿಹಾರ ನೀಡಿ: ನಡಹಳ್ಳಿ

| Published : Dec 10 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಜಿಲ್ಲೆಯಲ್ಲಿ ೫.೩೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಖಾಸಗಿ ಏಜೆನ್ಸಿಗಳ ಮೂಲಕ ಕಳಪೆ ತೊಗರಿ ಬೀಜ ವಿತರಿಸಿದ್ದರಿಂದ ಬೆಳೆ ಕಾಳುಕಟ್ಟದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಏಜೆನ್ಸಿಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರೈತರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಜಿಲ್ಲೆಯಲ್ಲಿ ೫.೩೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಖಾಸಗಿ ಏಜೆನ್ಸಿಗಳ ಮೂಲಕ ಕಳಪೆ ತೊಗರಿ ಬೀಜ ವಿತರಿಸಿದ್ದರಿಂದ ಬೆಳೆ ಕಾಳುಕಟ್ಟದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಏಜೆನ್ಸಿಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ರೈತರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಆಗ್ರಹಿಸಿದರು.

ಜಿಲ್ಲೆಯಲ್ಲಿ ರೈತರು ಬೆಳೆದ ತೊಗರಿ ಬೆಳೆ ಹಾನಿ ಹಾಗೂ ಪರಿಹಾರ ವಿತರಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಮತ್ತು ಜೆಡಿಎಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕಳಪೆ ಬೀಜದಿಂದ ರೈತರಿಗೆ ಆದ ನಷ್ಟವನ್ನು ತುಂಬಿಕೊಡುವ ನಿಟ್ಟಿನಲ್ಲಿ ಸರ್ಕಾರ ಅಧಿಕೃತವಾಗಿ ಸರ್ವೇ ಮಾಡಲು ಆದೇಶ ಮಾಡಬೇಕು. ಕನಿಷ್ಠ ₹ ೪ ರಿಂದ ೫ ಸಾವಿರ ಕೋಟಿ ಕಳಪೆ ಬೀಜದಿಂದ ರೈತರಿಗೆ ನಷ್ಟವಾಗಿದೆ. ಅದನ್ನು ಸರ್ಕಾರ ಭರಿಸಿಕೊಡಬೇಕು. ರೈತರಿಂದ ವೋಟ್‌ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಜಿಲ್ಲೆಯ ಉಸ್ತುವಾರಿ ಸಚಿವರು ಜೀವಂತ ಇದ್ದಾರೋ ಇಲ್ಲವೋ ಗೊತ್ತಿಲ್ಲಾ. ರೈತರಿಗೆ ಇಷ್ಟಲ್ಲ ನಷ್ಟವಾಗಿ ಹೋರಾಟ ಮಾಡುತ್ತಿದ್ದರೂ ಸಚಿವರು ತುಟಿ ಪಿಟಿಕ್ ಎನ್ನದೇ ಮೌನವಹಿಸಿದ್ದಾರೆ. ಇದರ ಒಳಗುಟ್ಟೇನು ಎಂದು ಪ್ರಶ್ನಿಸಿದರು.

ಇಲ್ಲಿಯವರೆಗೂ ರೈತರೆಲ್ಲ ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ. ದಿನಗಳೆದಂತೆ ಹೋರಾಟದ ಸ್ವರೂಪ ಬದಲಾಗುತ್ತಾ ಹೋಗಲಿದೆ. ಅಲ್ಲದೇ, ಸರ್ಕಾರ ಪರಿಹಾರ ಕೊಡದಿದ್ದರೆ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ ಮಾತನಾಡಿ, ಬಿಟ್ಟಿ ಭಾಗ್ಯಗಳ ಹೆಸರಿನ ಮೇಲೆ ರಾಜ್ಯವನ್ನು ಲೂಟಿ ಹೊಡೆಯುವುದರಲ್ಲಿ ಎಲ್ಲ ಮಂತ್ರಿಗಳು ತೊಡಗಿದ್ದಾರೆ. ಕಳಪೆ ಬೀಜ ವಿತರಿಸಿದ ಖಾಸಗಿ ಎಜನ್ಸಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ರೈತರಿಗೆ ಆದ ಹಾನಿಯ ಬಗ್ಗೆ ಪರಿಹಾರ ಕ್ರಮ ಕೈಗೊಳ್ಳಲು ಮಂತ್ರಿಗಳು ಮುಂದಾಗುತ್ತಿಲ್ಲ. ತೊಗರಿ ಬೆಳೆ ಹಾನಿಗೆ ಸೂಕ್ತ ಪರಿಹಾರ ಸಿಗುವವರೆಗೂ ಹೋರಾಟ ನಡೆಯಲಿದೆ ಎಂದು ಹೇಳಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ರೈತ ಮುಖಂಡ ಗಂಗಾಧರ ನಾಡಗೌಡ, ಮಲಕೇಂದ್ರಾಯಗೌಡ ಪಾಟೀಲ ಮಾತನಾಡಿದರು.

ಟ್ರ್ಯಾಕ್ಟರ್‌ ರ್‍ಯಾಲಿಗೆ ಸವಾರರು ಹೈರಾಣ:

ನೂರಾರು ಟ್ರ್ಯಾಕ್ಟರ್‌ಗಳೊಂದಿಗೆ ಸಾವಿರಾರು ರೈತರು ದೇವರಹಿಪ್ಪರಗಿ ರಸ್ತೆ, ಹುಣಸಗಿ ಮತ್ತು ವಿಜಯಪುರ ರಸ್ತೆಗಳ ಮೂಲಕ ತೊಗರಿ ಗಿಡಗಳನ್ನು ಪ್ರದರ್ಶಿಸುತ್ತಾ ರ್‍ಯಾಲಿ ನಡೆಸಿದರು. ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸುಮಾರು ೩ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗಿ ವಾಹನ ಸವಾರರು ಪರದಾಡಬೇಕಾಯಿತು.

ಬಳಿಕ, ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ ಆಗಮಿಸಿ ತೊಗರಿ ಬೆಳೆ ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿರುವ ಪ್ರತಿಯನ್ನು ಧರಣಿಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ನಡಹಳ್ಳಿ ಅವರಿಗೆ ನೀಡಿ, ನಂತರ ಮನವಿ ಸ್ವಿಕರಿಸಿದರು. ಮತ್ತು ಕಳಪೆ ಬೀಜ ವಿತರಣೆಯ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಎಸ್.ಪಾಟೀಲ(ನಾಲತವಾಡ), ಜೆಡಿಎಸ್ ತಾಲೂಕಾಧ್ಯಕ್ಷ ಮಡುಸಾಹುಕಾರ ಬಿರಾದಾರ, ಶಂಕರಗೌಡ ಹಿಪ್ಪರಗಿ, ಪರಶುರಾಮ ಕಟ್ಟಿಮನಿ, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಾಹೇಬಗೌಡ ವಣಕ್ಯಾಳ, ಪ್ರಭುಗೌಡ ಬಿರಾದಾರ(ಅಸ್ಕಿ), ಕಾಶಿನಾಥ ಮುರಾಳ, ಸಾಹೇಬಣ್ಣ ಆಲ್ಯಾಳ, ಮುತ್ತುಸಾಹುಕಾರ ಅಂಗಡಿ, ಎಂ.ಎಸ್.ಸರಶೆಟ್ಟಿ, ಪ್ರಕಾಶ ಹಜೇರಿ, ವಾಸುದೇವ ಹೆಬಸೂರ, ರಾಜುಗೌಡ ಗುಂಡಕನಾಳ, ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ, ಸುವರ್ಣಾ ಬಿರಾದಾರ, ಗೌಡಪ್ಪಗೌಡ ಮಾಳಿ, ಮುತ್ತಣ್ಣಗೌಡ ಢವಳಗಿ, ಅಶೋಕ ಅಸ್ಕಿ, ಡಿ.ಕೆ.ಪಾಟೀಲ, ತಿಪ್ಪಣ್ಣ ಆದ್ವಾನಿ, ಡಾ.ಭಲವಂತ್ರಾಯ ನಡಹಳ್ಳಿ, ಶಂಕ್ರಗೌಡ ದೇಸಾಯಿ, ಸೋಮನಗೌಡ ಕವಡಿಮಟ್ಟಿ, ವಿರೇಶಗೌಡ ಪಾಟೀಲ, ಆರ್.ಎಲ್.ಕೊಪ್ಪದ, ವಿಶ್ವನಾಥಗೌಡ ಲಕ್ಕುಂಡಿ, ಬಸನಗೌಡ ಪಾಟೀಲ(ಲಕ್ಕುಂಡಿ), ಪ್ರಭುಗೌಡ ಪಾಟೀಲ(ಲಕ್ಕುಂಡಿ), ವಿಠ್ಠಲ ಮೋಹಿತೆ, ರಾಘವೇಂದ್ರ ಮಾನೆ, ಈಶ್ವರ ಹೂಗಾರ, ಪ್ರಭು ಬಿಳೇಭಾವಿ, ನಿಂಗು ಕುಂಟೋಜಿ, ಮಂಜು ಮೈಲೇಶ್ವರ, ನದಿಂ ಕಡು, ಪ್ರಭುಗೌಡ ಬಿರಾದಾರ, ಬಸನಗೌಡ ಹಳ್ಳಿಪಾಟೀಲ, ಶಿವನಗೌಡ ಅಸ್ಕಿ, ರುದ್ರಗೌಡ ಅಸ್ಕಿ, ಪ್ರಮಾನಂದ ಮಾಡಗಿ, ರಾಮನಗೌಡ ಪಾಟೀಲ, ಶಿವನಗೌಡ ಗೊಟಗುಣಕಿ, ಎಚ್.ಬಿ.ಬಿರಾದಾರ, ಸಿದ್ದನಗೌಡ ಬಿರಾದಾರ, ಚಂದ್ರಶೇಖರ ಅಲದಿ, ಕೆಂಚಪ್ಪ ಬಿರಾದಾರ ಮೊದಲಾದವರು ಭಾಗವಹಿಸಿದ್ದರು.

---

ಕೋಟ್್

ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ರೈತರು ಬದುಕಿದ್ದಾರೋ ಸತ್ತಿದ್ದಾರೋ ಎಂದು ಕೇಳುತ್ತಿಲ್ಲ, ಇಬ್ಬರು ಸಚಿವರು ತೊಗರಿ ಬೆಳೆ ಹಾನಿಯ ಬಗ್ಗೆ ಒಂದೇ ಒಂದು ಮಾತು ಆಡುತ್ತಿಲ್ಲ. ಸದ್ಯ ತೊಗರಿ ದರ ಕ್ವಿಂಟಾಲ್‌ಗೆ ₹ ೧೦ ಸಾವಿರ ಇದೆ. ಕನಿಷ್ಠ ಎಕರೆಗೆ ೭ ರಿಂದ ೮ ಕ್ವಿಂಟಾಲ್ ತೊಗರಿ ಬರಬೇಕಿತ್ತು. ಆದರೆ ಎಕರೆಗೆ ೧ ಚೀಲ ಫಸಲು ಬರುತ್ತಿಲ್ಲ. ಹೀಗಾಗಿ, ಕೂಡಲೇ ಸರ್ಕಾರ ಎಕರೆಗೆ ₹ ೫೦ ಸಾವಿರ ಪರಿಹಾರ ನೀಡಬೇಕು. - ಎ.ಎಸ್.ಪಾಟೀಲ(ನಡಹಳ್ಳಿ), ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ.