ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗುತ್ತಿದ್ದು, ಸಾವಿರಾರು ಅಕ್ರಮ ಗೋ ಸಾಗಾಣಿಕೆ ಪ್ರಕರಣ, ಸಂಘಟಿತ ಕ್ರೌರ್ಯ ಪೂರ್ಣ ಗೋ ಹಿಂಸೆ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ, ಈ ಎಲ್ಲಾ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ತನಿಖೆಗೆ ಒಪ್ಪಿಸುವಂತೆ ಶ್ರೀರಾಮ ಸೇನೆ ಜಿಲ್ಲಾ ಘಟಕ ಮನವಿ ಅರ್ಪಿಸಿದೆ.ನಗರದ ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮುಖಾಂತರ ಶ್ರೀರಾಮ ಸೇನೆ ಪದಾಧಿಕಾರಿಗಳ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಅರ್ಪಿಸಿ, ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗುವುದನ್ನು ತಡೆಯುವಂತೆ, ಗೋವುಗಳ ವಿರುದ್ಧ ಕ್ರೌರ್ಯ ಮೆರೆಯುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘಟನೆ ಮುಖಂಡರು, ಕರ್ನಾಟಕದಲ್ಲಿ ಜಾರಿಯಲ್ಲಿರುವ ‘ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ-1964’ ಹಾಗೂ ‘ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ಕಾಯ್ದೆ-1960’ ಯನ್ನು ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಆದರೆ, ತನ್ನ ಜವಾಬ್ಧಾರಿಯನ್ನೇ ರಾಜ್ಯ ಸರ್ಕಾರ ಮರೆತಿದೆ. ಈಚಿನ ವರ್ಷಗಳಲ್ಲಿ ರಾಜ್ಯದೆಲ್ಲೆಡೆ ಸಾವಿರಾರು ಅಕ್ರಮ ಗೋ ಸಾಗಣೆ ಪ್ರಕರಣ, ಗೋವುಗಳ ಮೇಲೆ ಪೈಶಾಚಿಕ ದೌರ್ಜನ್ಯ ಎಸಗುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.ಅಕ್ರಮ ಗೋ ಸಾಗಾಣಿಕೆ ವಾಹನಗಳನ್ನು ಹಿಂದೂ ಕಾರ್ಯಕರ್ತರು ತಡೆದು, ಕಾನೂನು ಬದ್ಧವಾಗಿ ಪೊಲೀಸ್ ಇಲಾಖೆ ಒಪ್ಪಿಸುತ್ತಿದ್ದರೂ, ಅಂತಹ ಹಿಂದೂ ಕಾರ್ಯಕರ್ತರ ಮೇಲೆಯೇ ಎಫ್ಐಆರ್ ದಾಖಲಿಸಿ, ಕೇಸ್ ದಾಖಲಿಸುವ ಮೂಲಕ ಕಾನೂನು ದುರುಪಯೋಗಪಡಿಸಿಕೊಳ್ಳುವ ಕೆಲಸವಾಗುತ್ತಿದೆ. ಆದರೆ, ಗೋ ಹತ್ಯೆ ಮಾಫಿಯಾ ಹಾಗೂ ಪಶುಗಳ ಮೇಲೆ ಕ್ರೌರ್ಯ ಮೆರೆಯುತ್ತಿರುವ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಹೊಣೆಗೇಡಿತನ ಪ್ರದರ್ಶಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಅಮಾನವೀಯ ಘಟನೆ ನಡೆದಿದೆ. ಮೈಸೂರಿನಲ್ಲಿ ಮರಕಾಸ್ತ್ರಗಳಿಂದ ಗೋವಿನ ಮೇಲೆ ಹಲ್ಲೆ ಮಾಡಿದ ಕ್ರೂರ ಕೃತ್ಯ, ಗದಗ-ಬಾಗಲಕೋಟ. ಧಾರವಾಡ-ಹುಬ್ಬಳ್ಳಿಗಳಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ ಶವಗಳನ್ನು ಬಿಟ್ಟು ಭೀತಿಯ ಸೃಷ್ಟಿಸಿರುವುದು, ಗೋವಿನ ಬಾಲಕ್ಕೆ ಪರ್ವ್ಯೂಮ್ ಸ್ಪ್ರೇ ಮಾಡಿ, ಅದೇ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದವರನ್ನು ಪ್ರಶ್ನಿಸಿದವರ ಮೇಲೆಯೇ ಹಲ್ಲೆಗೆ ಯತ್ನಿಸಿರುವುದು ಧಾರ್ಮಿಕ ಭಯೋತ್ಪಾದಕ ಮನೋಭಾವವಾಗಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷದ ಹಿನ್ನೆಲೆಯಲ್ಲಿ ಗೋಹತ್ಯೆ ಮಾಫಿಯಾ ವಿರುದ್ಧ ಎನ್ಐಎ ತನಿಖೆಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಬೇಕು. ರಾಜ್ಯ ಮಟ್ಟದಲ್ಲಿ ವಿಶೇಷ ‘ಗೋ ಸಂರಕ್ಷಣಾ ನಿಯಂತ್ರಣ ದಳ’ ರಚಿಸಿ, ನಿರಂತರ ನಿಗಾ, ವಾಹನ ತಡೆ, ಪಶು ಸಂಗ್ರಹಣ ಮತ್ತು ಕಾನೂನು ಜಾರಿ ವ್ಯವಸ್ಥೆ ಬಲಪಡಿಸಬೇಕು ಎಂದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ, ಮುಖಂಡರಾದ ರಾಜು ದೊಡ್ಡಮನೆ, ವಿನೋದ, ಆರ್.ಎ.ವಿನಯ್, ಎನ್.ರಘು, ಜೆ.ಮಧು, ವೈ.ಮಂಜು, ಸೋಮಶೇಖರ, ಅವಿನಾಶ, ಪಳನಿವೇಲು, ಯಶವಂತ, ಸಿದ್ಧಾರ್ಥ, ಪಿ.ಡಿ.ಮಂಜುನಾಥ, ವಿನಾಯಕ, ಪರಶುರಾಮ, ಪ್ರಮೋದ ಇತರರು ಇದ್ದರು.