ಕನ್ನಡಪ್ರಭ ವಾರ್ತೆ ಹಾಸನನಿಯೋಜಿತ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುತ್ತಿರುವುದನ್ನು ಕರ್ನಾಟಕ ಮಾದಾರ ಮಹಾಸಭಾ ಸ್ವಾಗತಿಸಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಕೆ. ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಗೌರವ ಸಲ್ಲಿಸಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯತ್ ಬಿ. ಎಂ. ವೃತ್ತದ ಬಳಿ ಇರುವ ಅಂಬೇಡ್ಕರ್‌ ಪ್ರತಿಮೆ ಮುಂದೆ ಮಾದರ ಮಹಾಸಭಾದಿಂದ ಪ್ರತಿಭಟನೆ ನಡೆಸಿದರು.ಈ ಕುರಿತು ಕರ್ನಾಟಕ ಮಾದಾರ ಮಹಾಸಭಾ ಜಿಲ್ಲಾ ಅಧ್ಯಕ್ಷ ಟಿ. ಆರ್‌. ವಿಜಯ್ ಕುಮಾರ್‌ ಅವರು ಮಾತನಾಡಿ, ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷರು, ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಹಿರಂಗ ಪತ್ರ ಬರೆದಿದ್ದು, ಪತ್ರದಲ್ಲಿ, ಕೆ. ಎಚ್. ಮುನಿಯಪ್ಪ ಅವರು ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿ ಸೇವೆ ಸಲ್ಲಿಸಿದ್ದು, ಪಕ್ಷದ ಏಳಿಗೆಗಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ತಮ್ಮ ರಾಜಕೀಯ ಜೀವನದುದ್ದಕ್ಕೂ ಪಕ್ಷದ ಪರವಾಗಿ ದುಡಿದಿರುವ ಅವರಿಗೆ ಇದೀಗ ಸೂಕ್ತ ಗೌರವ ನೀಡುವ ಸಮಯ ಬಂದಿದೆ ಎಂದರು. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದಲ್ಲಿ ಅಪಾರ ಪ್ರಭಾವ ಹೊಂದಿರುವ ಕೆ. ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಸಮುದಾಯಕ್ಕೆ ನ್ಯಾಯ ದೊರೆಯುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸವೂ ಮತ್ತಷ್ಟು ಬಲಗೊಳ್ಳಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಮುದಾಯದ ಆಶಯವನ್ನು ಕಾಂಗ್ರೆಸ್ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಒಂದು ವೇಳೆ ಕೆ. ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೆ ಕೇವಲ ಸಚಿವ ಸ್ಥಾನಕ್ಕೆ ಸೀಮಿತಗೊಳಿಸಿದರೆ ಅದು ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಗಬಹುದು. ಅವರ ಹಿರಿತನ, ಅನುಭವ ಹಾಗೂ ರಾಜಕೀಯ ಸೇವೆಯನ್ನು ಪರಿಗಣಿಸಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬುದು ಸಮುದಾಯದ ಪ್ರಮುಖ ಬೇಡಿಕೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆಗಳ ಮೇಲೆ ಈ ನಿರ್ಧಾರ ಪರಿಣಾಮ ಬೀರುವ ಸಾಧ್ಯತೆ ಇದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮತದಾರರನ್ನು ಇತರ ರಾಜಕೀಯ ಪಕ್ಷಗಳು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೆ.ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಜತೆಗೆ ಕಂದಾಯ, ಗೃಹ, ಲೋಕೋಪಯೋಗಿ, ಸಹಕಾರ ಅಥವಾ ಇಂಧನ ಇಲಾಖೆಗಳಂತಹ ಪ್ರಮುಖ ಖಾತೆಗಳನ್ನು ನೀಡಬೇಕು. ಇದರಿಂದ ಸಮುದಾಯದ ಗೌರವ ಉಳಿಯುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೂ ಹೆಚ್ಚಿನ ಬಲ ದೊರೆಯಲಿದೆ ಎಂದು ಹೇಳಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಕೆ. ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕೆ. ಎಚ್. ಮುನಿಯಪ್ಪ ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ನಿರ್ಧಾರ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯವಾಗಿ ಲಾಭದಾಯಕವಾಗಲಿದ್ದು, ಸಮುದಾಯದ ವಿಶ್ವಾಸ ಉಳಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಇದೇ ವೇಳೆ ಕರ್ನಾಟಕ ಮಾದಾರ ಮಹಾಸಭಾದ ಸತೀಶ್ ಕಡಗ, ತಿರುಪತಿಹಳ್ಳಿ ಮುನಿಸ್ವಾಮಿ, ಪೊಲೀಸ್ ಶಿವಣ್ಣ, ನಾಗರಾಜು, ಭೈರೇಶ್, ರಮೇಶ್, ರಾಮಣ್ಣ, ಚಂದ್ರಶೇಖರ್, ದೇವರಾಜು, ತೊಂಡಿಗನಹಳ್ಳಿ ರವಿ, ರಂಗಸ್ವಾಮಿ ಬಾಣಾವರ, ರಾಕೇಶ್ ತೆರಣ್ಯ, ವಸಂತಮ್ಮ, ಕೃಷ್ಣ ಹಳೇಬೀಡು, ಮನೋಜ್ ಕಡಗ, ಆನೆಕನ್ನಂಬಾಡಿ ಮಂಜು, ಕುಶ ಆಲೂರು, ಸೋಮಶೇಖರ್‌ ಹಂಪನಹಳ್ಳಿ ಇತರರು ಉಪಸ್ಥಿತರಿದ್ದರು.