ಕನ್ನಡಪ್ರಭ ವಾರ್ತೆ ಕಾರವಾರ
ನೂತನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿದೆ.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ದೀಪಕ್ ಕುಡಾಳಕರ್, ದಲಿತರ ಹಕ್ಕುಗಳು ಹಾಗೂ ಜಿಲ್ಲೆಯಲ್ಲಿ ಆಗುತ್ತಿರುವ ಅನ್ಯಾಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯ ನಾಯಕರೊಬ್ಬರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎನ್ನುವುದು ಸಮಿತಿಯ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಕನಿಷ್ಠ ಡಿಸಿಎಂ ಸ್ಥಾನವನ್ನಾದರೂ ದಲಿತರಿಗೆ ನೀಡಲೇಬೇಕು ಎಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ದಲಿತರಿಗೆ ತೀವ್ರ ರಾಜಕೀಯ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಹಿಂದೆ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕಿದ್ದ ಪರಿಶಿಷ್ಟ ಮೀಸಲಾತಿಯನ್ನು ತೆಗೆದುಹಾಕಲಾಗಿದೆ. ಜಿಲ್ಲೆಯಲ್ಲಿ 3 ರಿಂದ 4 ಲಕ್ಷದಷ್ಟು ಎಸ್ಸಿ/ಎಸ್ಟಿ ಜನಸಂಖ್ಯೆ ಇದ್ದರೂ, ಇಲ್ಲಿನ ನಾಯಕರಿಗೆ ಯಾವುದೇ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಅಥವಾ ಸದಸ್ಯತ್ವ ನೀಡದೆ ಕಡೆಗಣಿಸಲಾಗಿದೆ ಎಂದರು.
ಇನ್ನು ನಗರದ ಮಖೇರಿಯಲ್ಲಿ ₹10 ಕೋಟಿ ಅನುದಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಇದು ಕಾರವಾರ ನಗರದಿಂದ 5-10 ಕಿಮೀ ದೂರದಲ್ಲಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಅಲ್ಲಿಗೆ ಹೋಗಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟ. ಹೀಗಾಗಿ, ಕಾರವಾರ ನಗರದ ಈಜುಕೊಳದ ಹಿಂಭಾಗದಲ್ಲಿರುವ ತಾತ್ಕಾಲಿಕ ಹಣ್ಣು-ತರಕಾರಿ ಮಾರುಕಟ್ಟೆ ಜಾಗದಲ್ಲಿಯೇ ಭವನ ನಿರ್ಮಿಸಬೇಕು. ಜೊತೆಗೆ ಇಷ್ಟು ದೊಡ್ಡ ಗಡಿ ಜಿಲ್ಲೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಒಂದು ಸುಸಜ್ಜಿತ ಪುತ್ಥಳಿಯೂ ಇಲ್ಲದಿರುವುದು ನಮ್ಮ ದೌರ್ಭಾಗ್ಯ ಎಂದರು.
ಸ್ಥಳೀಯ ಶಾಸಕರಿಗೆ ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲವಾಗಿದ್ದು, ಅವರು ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೂ ಒಮ್ಮೆಯೂ ತಲೆಹಾಕಿಲ್ಲ. ಜಿಲ್ಲೆಯಲ್ಲಿ ದಶಕಗಳಿಂದ ಕೂಲಿ ಮಾಡಿ ಬದುಕುತ್ತಿರುವ ಸಾವಿರಾರು ಪರಿಶಿಷ್ಟರಿಗೆ ವಸತಿ ಸೌಲಭ್ಯವಿಲ್ಲ, ಗುಂಟೆ ಜಾಗವೂ ಇಲ್ಲ. ವಿಕಲಚೇತನರಿಗೆ ವಿತರಣೆಯಾಗಬೇಕಿರುವ ವಾಹನಗಳು ನಗರಸಭೆ ಆವರಣದಲ್ಲೇ ಮಳೆಗೆ ಬಿದ್ದು ತುಕ್ಕು ಹಿಡಿಯುತ್ತಿವೆ. ಕೆಡಿಪಿ ಸಭೆಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುವವರಿಲ್ಲ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಬರಬೇಕಾದ ವಿಶೇಷ ಅನುದಾನಗಳು ವಾಪಸ್ ಹೋಗುತ್ತಿವೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅನುದಾನವೂ ಸಮುದಾಯಕ್ಕೆ ಸಾಲುತ್ತಿಲ್ಲ ಎಂದು ದೀಪಕ್ ಕುಡಾಳಕರ್ ಆಕ್ರೋಶ ಹೊರಹಾಕಿದರು.
ಜಿಲ್ಲಾ ಸಂಘಟನಾ ಸಂಚಾಲಕ ಗಾರೂ ಮಾಂಗ್ರೆ, ಪ್ರಮುಖರಾದ ಸಚ್ಚಿದಾನಂದ, ರಾಜೇಂದ್ರ ಮಾದರ, ಮಣಿಕಂಠ, ಗಜಾನನ ಪಾವಸ್ಕರ್, ಉಮೇಶ ಚಿಂಚಣಕರ್, ಪ್ರಕಾಶ ಚಿಂಚಣಕರ್ ಹಾಗೂ ಸುರೇಂದ್ರ ಆವರ್ಸೇಕರ್ ಉಪಸ್ಥಿತರಿದ್ದರು.