ಸಾರಾಂಶ
ಅಂಕೋಲಾ: ಅಂಗವಿಕಲರಿಗೆ ಅವಶ್ಯವಿರುವುದು ಅವಕಾಶಗಳೇ ಹೊರತು ಅನುಕಂಪವಲ್ಲ. ಅವರನ್ನು ಮುಖ್ಯವಾಹಿನಿಗೆ ತರಲು ಒಟ್ಟಾಗಿ ಪ್ರಯತ್ನಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಲಲಕ್ಷ್ಮೀ ಪಾಟೀಲ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣ ಯೋಜನೆಯಡಿ ಹಮ್ಮಿಕೊಂಡಿದ್ದ ವಿಶೇಷ ಚೇತನ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಸಚೇತನ ಬೀದಿನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಭಾವಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪ ನಾಯಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಸದಸ್ಯ ಉದಯ ವಾಮನ ನಾಯಕ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಶಿಕ್ಷಕರ ಸಂಘದ ಕಾರ್ಯದರ್ಶಿ ರಾಜು ನಾಯಕ, ಉಪಾಧ್ಯಕ್ಷೆ ಭಾರತಿ ನಾಯಕ, ಶಾಲಾ ಮುಖ್ಯಾಧ್ಯಾಪಕಿ ಅನಿತಾ ಕೇಣಿ ಉಪಸ್ಥಿತರಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು. ರಾಜೇಶ ನಾಯಕ ಸೂರ್ವೇ ನಿರ್ವಹಿಸಿದರು. ಅಂಕೋಲಾ ತಾಲೂಕಿನ ಶಿಕ್ಷಕರಿಂದ ವಿಶೇಷಚೇತನ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕ ಸಚೇತನ ವಿಶೇಷಚೇತನ ಮಕ್ಕಳ ಕುರಿತು ಬೀದಿನಾಟಕವನ್ನು ಸ್ವತಃ ಶಿಕ್ಷಕರೇ ರಚಿಸಿ, ಪ್ರದರ್ಶಿಸಿದ್ದು ವಿಶೇಷವಾಗಿತ್ತು.ಯಕ್ಷಗಾನ ಕಲಾವಿದರ ಗುರುತಿಸುವ ಕಾರ್ಯವಾಗಲಿ
ಹೊನ್ನಾವರ: ಹೆಚ್ಚು ಪ್ರಚಾರವಿಲ್ಲದ, ಎಲೆಮರೆಯ ಕಾಯಿಯಂತಿರುವ ಜಿಲ್ಲೆಯ ಯಕ್ಷಗಾನ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ನಾಯ್ಕ ತಿಳಿಸಿದರು.ಮಾಳ್ಕೋಡದಲ್ಲಿ ಆಯೋಜಿಸಿದ್ದ ಮಾಳ್ಕೋಡ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಕ್ಷಗಾನವು ಶ್ರೇಷ್ಠವಾದ ಕಲೆ. ಯಕ್ಷಗಾನಕ್ಕೆ ಜಿಲ್ಲೆಯ ಕೊಡುಗೆ ಬಹು ದೊಡ್ಡದು. ಯಕ್ಷಗಾನ ಕಲಾವಿದರ ಅಭಿವೃದ್ಧಿಗೆ ಎಲ್ಲರೂ ಸಹಕಾರವನ್ನು ನೀಡಬೇಕು ಎಂದರು.ಕೊಳಲು ತಯಾರಕ, ಸಿದ್ದಾಪುರದ ಮಂಜುನಾಥ ಹೆಗಡೆ ನೆಟ್ಗಾರ, ಯಕ್ಷಗಾನ ಕಲಾವಿದ ಅಶೋಕ್ ಭಟ್, ಸಿದ್ದಾಪುರ, ಹಿರಿಯ ಕೊನೆ ಗೌಡ ಹನುಮಂತ ಗೌಡ ಮಾಳ್ಕೋಡ ಅವರನ್ನು ಸನ್ಮಾನಿಸಲಾಯಿತು. ಸಹಕಾರಿ ಧುರೀಣ ಕೇಶವ ನಾಯ್ಕ ಬಳ್ಕೂರು, ಶಂಭು ಬೈಲಾರ ಇದ್ದರು. ಸಂಗೀತ ಕಾರ್ಯಕ್ರಮದಲ್ಲಿ ಗುರುಪ್ರಸಾದ ಹೆಗಡೆ ಕೊಳಲು ವಾದನ, ಸುಮಾ ಹೆಗಡೆ ಅವರ ಸಂತೂರ್ ಹಾಗೂ ಅಕ್ಷಯ ಹೆಗಡೆ ಅಂಸಳ್ಳಿ ತಬಲಾ ಸಾಥ್ ಜನಮೆಚ್ಚುಗೆ ಗಳಿಸಿತು.ಬಳಿಕ ನಡೆದ ಕೀಚಕ ವಧೆ ಯಕ್ಷಗಾನದಲ್ಲಿ ಕೀಚಕನಾಗಿ ಜಗದೀಶ ಹೆಗಡೆ ಮಾಳಕೋಡ, ಬಲಭೀಮನಾಗಿ ಲಕ್ಷ್ಮಿನಾರಾಯಣ ಹೆಗಡೆ ಶಿರಗುಣಿ, ಸೈರೇಂಧ್ರಿಯಾಗಿ ಜಯರಾಮ ಕೊಠಾರಿ, ನಂತರ ನಡೆದ ಇನ್ನೊಂದು ಆಖ್ಯಾನ ಚಂದ್ರಾವಳಿ ವಿಲಾಸದಲ್ಲಿ ಚಂದ್ರಾವಳಿಯಾಗಿ ವಂಡಾರು ಗೋವಿಂದ, ಕೃಷ್ಣನಾಗಿ ರಾಜೇಶ್ ಭಂಡಾರಿ ಗುಣವಂತೆ, ಚಂದಗೋಪನಾಗಿ ಅಶೋಕ್ ಬಟ್ ಸಿದ್ದಾಪುರ, ಅಜ್ಜಿಯಾಗಿ ಶ್ರೀಧರ ಹೆಗಡೆ ಚಪ್ಪರಮನೆ ಮನೋಜ್ಞವಾಗಿ ಅಭಿನಯಿಸಿದರು.ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಸರ್ವೇಶ್ವರ ಮೂರೂರು, ಸುಬ್ರಹ್ಮಣ್ಯ ಭಂಡಾರಿ ಗುಣವಂತೆ, ಪರಮೇಶ್ವರ ಭಂಡಾರಿ ಕರ್ಕಿ, ರಾಘವೇಂದ್ರ ಹೆಗಡೆ ಯಲ್ಲಾಪುರ ಸಹಕರಿಸಿದರು. ಸುಜಾತಾ ಹೆಗಡೆ, ಮಾನಸ ಮತ್ತು ಗೌರೀಶ ಹೆಗಡೆ ಸಂಯೋಜಿಸಿದರು.